ಚಾಮರಾಜನಗರ : ನರೇಂದ್ರ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಪ್ರಜಾಪ್ರಭುತ್ವ ವಿರೋಧಿ. ನರೇಂದ್ರ ಮೋದಿ ಸರ್ಕಾರದಲ್ಲಿ ಸಂವಿಧಾನ ಸುರಕ್ಷಿತವಾಗಿಲ್ಲ. ನಾವು ಉಳಿಯಬೇಕಾದರೆ ಸಂವಿಧಾನ ಉಳಿಯಲೇಬೇಕು. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಗೆ ಮತ ಹಾಕಬೇಕು. ಮುಸಲೋನಿ, ಹಿಟ್ಲರ್ ಸಿದ್ಧಾಂತದಲ್ಲಿ ನಂಬಿಕೆ ಬಿಜೆಪಿ ಇಟ್ಟಿದೆ. ಈ ದೇಶದಲ್ಲಿ ಸಂವಿಧಾನ ಜಾರಿಯಾದಾಗ ಅದನ್ನು ವಿರೋಧಿಸಿದ್ದು ಆರ್.ಎಸ್.ಎಸ್. ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.ಇಂದು ಕೊಳ್ಳೇಗಾಲ ನಗರದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿ ಸುನೀಲ್ ಬೋಸ್ ಅವರ ಪರ ಪ್ರಜಾಧ್ವನಿ -02 ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 43 % ಮತಗಳನ್ನು ಪಡೆದು 136 ಸ್ಥಾನಗಳನ್ನು ಪಡೆದಿದ್ದೇವೆ.
ಅಧಿಕಾರದಲ್ಲಿದ್ದ ವಿರೋಧ ಪಕ್ಷ ಕೇವಲ 66 ಸ್ಥಾನಗಳನ್ನು ಪಡೆಯಿತು. ಜಾತ್ಯಾತೀತ ಎಂದು ಹೇಳಿಕೊಳ್ಳುವ ಪಕ್ಷ 19 ಸ್ಥಾನಗಳನ್ನು ಪಡೆಯಿತು. ಈಗ ಅವರಿಬ್ಬರಿಗೂ ಈ ಚುನಾವಣೆಯಲ್ಲಿ ಭಯ ಬಂದಿದೆ. ಒಟ್ಟುಗೂಡಿ ಕಾಂಗ್ರಸ್ ಪಕ್ಷವನ್ನು ಎದುರಿಸುವ ಪ್ರಯತ್ನ ಮಾಡುತ್ತಿದ್ದಾರೆ ಯಾವುದೇ ಸಿದ್ಧಾಂತ, ಕಾರ್ಯಕ್ರಮ ಇಲ್ಲದೇ, ಕಾಂಗ್ರೆಸ್ ಸೋಲಿಸಬೇಕು ಎನ್ನುವುದೊಂದೇ ಗುರಿ. ಬಡವರು, ರೈತರು, ದಲಿತರು, ಹಿಂದುಳಿದ, ಅಲ್ಪಸಂಖ್ಯಾತರ ಪರವಾಗಿ ಏನು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅವರು ಯಾವ ಸಾಧನೆಯನ್ನೂ ಮಾಡಿಲ್ಲ. ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಒಂದು ವರ್ಷ ಮುಖ್ಯಮಂತ್ರಿಯಾಗಿದ್ದರು. ನಂತರ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. 5 ವರ್ಷಗಳ ಅವಧಿಯಲ್ಲಿ ಏನೂ ಕೆಲಸ ಮಾಡಿಲ್ಲ. ಅವರು ಕೇಳುತ್ತಿರುವುದು ಮೋದಿಗೆ ಮತ ಹಾಕಿ ಎಂದು ಕೆಲಸದ ಆಧಾರದ ಮೇಲೆ ಅಲ್ಲ. ಇವರ್ಯಾರಿಗೂ ಮತ ಕೇಳಲು ಮುಖವೂ ಇಲ್ಲ, ನೈತಿಕತೆಯೂ ಇಲ್ಲ ಎಂದರು.