ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿರುವ ಪ್ರಜ್ವಲ್ ರೇವಣ್ಣಗೆ ಕಾನೂನು ಕುಣಿಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಎಸ್ಐಟಿ ಹೆಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಎಸ್ಐಟಿ ಅಧಿಕಾರಿಗಳ ತಂಡ ಇಂದು ಹಾಸನ ಜಿಲ್ಲೆಯ ಹೆಚ್ ಡಿ ರೇವಣ್ಣ ನಿವಾಸಕ್ಕೆ ತೆರಳಿ ಸ್ಥಳ ಮಹಜರು ನಡೆಸುವ ಸಾಧ್ಯತೆಗಳಿವೆ. ಹಾಸನದಲ್ಲಿರುವ ಹೆಚ್ ಡಿ ರೇವಣ್ಣ ನಿವಾಸ ಮತ್ತು ಫಾರ್ಮ್ ಹೌಸ್ ನಲ್ಲಿ ತಮ್ಮ ವಿರುದ್ಧ ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಹಲವು ಮಹಿಳೆಯರು ಮತ್ತು ಯುವತಿಯರು ದೂರು ನೀಡಿರುವ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳ ತಂಡ ಹಾಸನದಲ್ಲಿ ತೀವ್ರ ತನಿಖೆ ನಡೆಸಲಿದ್ದಾರೆ. ಇನ್ನು ಮಾಜಿ ಸಚಿವ ಶಾಸಕ ಹೆಚ್ ಡಿ ರೇವಣ್ಣ ಅವರು ಮೇ 4ರಂದು ಎಸ್ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.