ಮೂಢನಂಬಿಕೆಯ ಪರಮಾವಧಿ ಎನ್ನಬಹುದಾದ ಘಟನೆಯೊಂದು ಉತ್ತರ ಪ್ರದೇಶ ರಾಜ್ಯದ ಬುಲಂದ್ಶೆಹರ್ ಜಿಲ್ಲೆಯ ಜಹಂಗೀರಾಬಾದ್ನಲ್ಲಿ ನಡೆದಿದೆ.ಇಲ್ಲಿನ 22 ವರ್ಷ ವಯಸ್ಸಿನ ಯುವಕನೊಬ್ಬ ಹಾವು ಕಡಿತದಿಂದ ಸಾವನಪ್ಪಿದ್ದ, ಆದರೆ ಆತನ ಕುಟುಂಬಸ್ಥರು ಯುವಕನ ಶವವನ್ನು ಸುಮಾರು 2 ದಿನಗಳ ಕಾಲ ಗಂಗಾ ನದಿಯಲ್ಲಿ ಮುಳುಗಿಸಿ ಇಟ್ಟಿದ್ದರು.ಪವಾಡ ಸಂಭವಿಸಿ ಆತ ಮತ್ತೆ ಬದುಕಬಹುದು ಎಂಬ ಕಾರಣಕ್ಕೆ ಯುವಕ ಕುಟುಂಬಸ್ಥರು ಈ ರೀತಿ ಮಾಡಿದ್ರಂತೆ!
ಹೌದು …ಅಚ್ಚರಿ ಎನಿಸಿದರೂ ಸತ್ಯ! ಯುವಕ ಮೋಹಿತ್ ಕುಮಾರ್ ಆಕಸ್ಮಿಕವಾಗಿ ಹಾವೊಂದನ್ನು ತುಳಿದಿದ್ದ ಹಾವು ಯುವಕನ ಕಾಲಿಗೆ ಕಚ್ಚಿತ್ತು. ಕೂಡಲೇ ಸ್ಥಳೀಯರು, ಕುಟುಂಬಸ್ಥರು ಯುವಕನನ್ನು ಗ್ರಾಮದ ಬಳಿಯಲ್ಲಿ ಇದ್ದ ಹಾವಾಡಿಗನೊಬ್ಬನ ಬಳಿ ಕರೆದೊಯ್ದಿದ್ದಾರೆ. ಆದರೆ ಆತ ನೀಡಿದ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಬಳಿಕ ಕುಟುಂಬಸ್ಥರು ಯುವಕನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.ಆಸ್ಪತ್ರೆಗೆ ತಲುಪುವಷ್ಟರಲ್ಲಿ ಯುವಕನ ಪ್ರಾಣಪಕ್ಷಿ ಹಾರಿಹೋಗಿತ್ತು.
ಯುವಕ ಸಾವನ್ನಪ್ಪಿದ ಬಳಿಕವೂ ಕುಟುಂಬಸ್ಥರ ಮೌಢ್ಯ ಮುಂದುವರೆದಿತ್ತು ಯುವಕನ ದೇಹದಲ್ಲಿ ವಿಷ ವ್ಯಾಪಿಸಿದೆ. ಹೀಗಾಗಿ,ಮೃತ ದೇಹವನ್ನು ಗಂಗಾ ನದಿಯಲ್ಲಿ ಮುಳುಗಿಸಿಟ್ಟರೆ ಗಂಗಾ ನದಿಯ ಪವಿತ್ರ ನೀರಿನಿಂದಾಗಿ ಯುವಕನ ದೇಹದಲ್ಲಿ ಇರುವ ವಿಷ ಇಳಿದು ಹೋಗಬಹುದು ಎಂದು ಯಾರೋ ಹೇಳಿದ ಮಾತನ್ನು ಕೇಳಿ ಯುವಕನ ಶವವನ್ನು ಗಂಗಾ ನದಿ ನೀರಿನಲ್ಲಿ ಮುಳುಗಿಸಿ ಇಟ್ಟರು.ಬಳಿಕ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ನೆರವಿನಿಂದ ಯುವಕನ ಕುಟುಂಬಸ್ಥರ ಮನವೊಲಿಸಿ ಆತನ ಶವದ ಅಂತ್ಯ ಕ್ರಿಯೆ ನಡೆಸಿದ್ದಾರೆ.