ಮ್ಯಾಡ್ರಿಡ್: ಸ್ಪೇನ್ ನ ಖ್ಯಾತ ಟೆನಿಸ್ ಆಟಗಾರ, ಆವೆ ಅಂಗಣದ ರಾಜ ಎಂದೇ ಕರೆಸಿಕೊಂಡಿರುವ ರಫೇಲ್ ನಡಾಲ್ ವೃತ್ತಿಪರ ಟೆನಿಸ್ ಗೆ ನಿವೃತ್ತಿ ಘೋಷಿಸಿದ್ದಾರೆ. 14 ಫ್ರೆಂಚ್ ಓಪನ್ ಕಿರೀಟ ಸೇರಿದಂತೆ 22 ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್ ಅವರ ವೃತ್ತಿ ಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆ ದುಃಸ್ವಪ್ನವಾಗಿ ಕಾಡಿತ್ತು.
ಆದರೂ 209 ವಾರಗಳ ಕಾಲ ವಿಶ್ವದ ನಂಬರ್ ವನ್ ಟೆನಿಸ್ ಪಟುವಾಗಿ ಅಗ್ರಸ್ಥಾನ ಉಳಿಸಿಕೊಂಡಿದ್ದರು. 1986ರ ಜೂನ್ 3ರಂದು ಸ್ಪೇನ್ ನ ಮ್ಯಾನಕೋರ್ನಲ್ಲಿ ಜನಿಸಿದ ರಫೇಲ್ ನಡಾಲ್, 2001ರಲ್ಲಿ ವೃತ್ತಿಪರ ಟೆನಿಸ್ ಗೆ ಪದಾರ್ಪಣೆ ಮಾಡಿದ್ದರು.
ವೃತ್ತಿಬದುಕಿನಲ್ಲಿ 134.9 ದಶಲಕ್ಷ ಡಾಲರ್ ಗಳಿಸಿದ್ದ ಇವರು 22 ಗ್ರಾಂಡ್ ಸ್ಲಾಂ ಮತ್ತು 92 ಎಟಿಪಿ ಪ್ರಶಸ್ತಿಗಳನ್ನು ಗೆದ್ದಿದ್ದರು. 2009 ಮತ್ತು 2002ರಲ್ಲಿ ಆಸ್ಟ್ರೇಲಿಯನ್ ಓಪನ್, 14 ಬಾರಿ ಫ್ರೆಂಚ್ ಓಪನ್, 2008 ಮತ್ತು 2010ರಲ್ಲಿ ವಿಂಬಲ್ಡನ್, 2010, 2013, 2017 ಮತ್ತು 2019ರಲ್ಲಿ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದರು.
2008ರಲ್ಲಿ ಒಲಿಂಪಿಕ್ಸ್ ಸಿಂಗಲ್ಸ್ ನಲ್ಲಿ ಚಿನ್ನದ ಪದಕ ಮತ್ತು 2016ರಲ್ಲಿ ಡಬಲ್ಸ್ ಚಿನ್ನ ಗೆದ್ದಿದ್ದರು. 2004, 2009, 2011 ಮತ್ತು 2019ರಲ್ಲಿ ಡೇವಿಸ್ ಕಪ್ ಗೆದ್ದಿದ್ದ ಇವರು 209 ವಾರಗಳ ಕಾಲ ವಿಶ್ವದ ಅಗ್ರ ರ್ಯಾಂಕಿಂಗ್ ಆಟಗಾರನಾಗಿದ್ದರು. ಪ್ರಸ್ತುತ ವಿಶ್ವದ 154ನೇ ಕ್ರಮಾಂಕದ ಆಟಗಾರರಾಗಿರುವ ನಡಾಲ್ ವೃತ್ತಿಬದುಕಿನಲ್ಲಿ 1080 ಪಂದ್ಯಗಳನ್ನು ಗೆದ್ದು, 227 ಪಂದ್ಯಗಳನ್ನು ಸೋತಿದ್ದಾರೆ.