2025-26ರಲ್ಲಿ ನಮ್ಮ ಭಾರತದ ಪ್ರಧಾನಿ ಮೇಲೆ ದಾಳಿ ನಡೆಯಬಹುದಾದ ಸಂಭವವಿದ್ದು ಪ್ರಧಾನಿಯವರ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸುವುದು ಕ್ಷೇಮ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಜ್ಯೋತಿಷಿ ಗಾಯತ್ರಿ ದೇವಿ ವಾಸುದೇವ್ ಅವರು ಭವಿಷ್ಯ ನುಡಿದಿದ್ದಾರೆ. ಜ್ಯೋತಿಷಿ ಗಾಯತ್ರಿ ದೇವಿ ವಾಸುದೇವ್ ಅವರು ತಮ್ಮ ಮಾಡರ್ನ್ ಅಸ್ಟ್ರಾಲಜಿ ಇಂಗ್ಲಿಷ್ ಮಾಸಪತ್ರಿಕೆಯ ಜನವರಿ ಸಂಚಿಕೆಯಲ್ಲಿಯೇ ಈ ಬಾರಿಯ ಯುಗಾದಿ ಸಂವತ್ಸರದ ಬಗ್ಗೆ ಲೇಖನ ಬರೆದಿದ್ದಾರೆ. ವಿಶ್ವಾವಸುನಾಮ ಸಂವತ್ಸರದ 2025 – 2026ನೇ ಇಸವಿಯಲ್ಲಿ ಭಾರತದಲ್ಲಿ ನಡೆಯಬಹುದಾದ ಒಳ್ಳೆಯದು ಹಾಗೂ ಕೆಟ್ಟ ಘಟನೆಗಳ ಬಗ್ಗೆ ಗಾಯತ್ರಿ ದೇವಿ ವಾಸುದೇವ್ ಅವರು ತಮ್ಮ ಜ್ಯೋತಿಷ್ಯ ಮಾಸಪತ್ರಿಕೆಯಲ್ಲಿ ಬರೆದಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ 50 ವರ್ಷಕ್ಕೂ ಹೆಚ್ಚು ಅನುಭವ ಇರುವಂಥ ಗಾಯತ್ರಿ ದೇವಿ ಅವರು ಭಾರತದ ಖ್ಯಾತ ಜ್ಯೋತಿಷಿ ದಿವಂಗತ ಬಿ.ವಿ. ರಾಮನ್ ಅವರ ಮಗಳು. ಬಿ.ವಿ. ರಾಮನ್ ಅವರನ್ನು ಫಾದರ್ ಆಫ್ ಮಾಡರ್ನ್ ಅಸ್ಟ್ರಾಲಜಿ ಎಂದು ಕರೆಯುತ್ತಿದ್ದರು. ಭಾರತೀಯ ಜ್ಯೋತಿಷ್ಯ ಪದ್ಧತಿಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಬಹಳ ದೊಡ್ಡ ಹೆಸರು ಮಾಡಿದವರು ಬಿ.ವಿ.ರಾಮನ್. ಇವರು ಜ್ಯೋತಿಷ್ಯದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಬಿ.ವಿ.ರಾಮನ್ ಅವರು 2ನೇ ವಿಶ್ವಯುದ್ಧ ನಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅಲ್ಲದೇ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಏಳುಬೀಳುಗಳು, ರಾಜಕೀಯ ಜೀವನದ ಬಗ್ಗೆ ಕರಾರುವಕ್ಕಾಗಿ ಭವಿಷ್ಯ ನುಡಿಯುವ ಮೂಲಕ ರಾಜಕೀಯ ವಲಯದಲ್ಲಿ ಹೆಚ್ಚಿನ ಮನ್ನಣೆ ಗಳಿಸಿದ್ದರು.
ಜ್ಯೋತಿಷಿ ಗಾಯತ್ರಿ ದೇವಿಯವರ ತಮ್ಮ ಮಾಡರ್ನ್ ಅಸ್ಟ್ರಾಲಜಿ ಇಂಗ್ಲಿಷ್ ಮಾಸಪತ್ರಿಕೆಯ ಜನವರಿ ಸಂಚಿಕೆಯಲ್ಲಿಯೇ ಯುಗಾದಿ ಸಂವತ್ಸರ ಭವಿಷ್ಯವನ್ನು ಬರೆದಿದ್ದಾರೆ. ಭಾರತದಲ್ಲಿ ನಡೆಯಬಹುದಾದ ವಿದ್ಯಮಾನಗಳ ಕುರಿತು ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ತಿಳಿಸಿಕೊಟ್ಟಿದ್ದಾರೆ.
ಮುಖ್ಯವಾಗಿ ಭಾರತದ ಪ್ರಧಾನಿಯವರ ಮೇಲೆ ಹಿಂಸಾತ್ಮಕ ದಾಳಿ ನಡೆಯಬಹುದಾಗಿದ್ದು, ಯಾವುದೇ ನಿರ್ಲಕ್ಷ್ಯ ವಹಿಸದೇ ಪ್ರಧಾನಿಯವರ ಭದ್ರತಾ ವ್ಯವಸ್ಥೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವುದು ಕ್ಷೇಮ ಎಂದು ಭವಿಷ್ಯ ನುಡಿದಿದ್ದಾರೆ. ಇದರ ಜೊತೆಗೆ ವಿರೋಧ ಪಕ್ಷದ ಪ್ರಮುಖ ನಾಯಕರ ಆರೋಗ್ಯ ಸ್ಥಿತಿಯು ಗಂಭೀರ ಸ್ಥಿತಿ ತಲುಪಬಹುದು ಎಂದು ಕೂಡ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂಸಾಚಾರ ನಡೆಯಬಹುದು. ವಿರೋಧ ಪಕ್ಷಗಳು ಸಂಸತ್ ಕಲಾಪದಲ್ಲಿ ಕಂಡು ಕೇಳರಿಯದ ಅವಮಾನಕರ ರೀತಿಯಲ್ಲಿ ನಡೆದುಕೊಳ್ಳಲಿವೆ. ಈ ಬಾರಿಯ ಸಂಸತ್ ಕಲಾಪ ವೇಳೆ ದೇಶದ ಅಭಿವೃದ್ಧಿ ಹಾಗೂ ಮಹಿಳೆಯರ ಸಬಲೀಕರಣ ನಿಟ್ಟಿನಲ್ಲಿ ಪ್ರಮುಖ ಕಾಯ್ದೆಗಳನ್ನು ತರಲಾಗುತ್ತದೆ ಎಂದಿದ್ದಾರೆ.
ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ಸದ್ಯ ಮುಖ್ಯಮಂತ್ರಿ ಹುದ್ದೆ ಅಥವಾ ಸ್ಥಾನಕ್ಕಾಗಿ ನಡೆಯುವ ತಿಕ್ಕಾಟದಿಂದಾಗಿ ಆತಂಕ ಹಾಗೂ ಒತ್ತಡದ ವಾತಾವರಣ ಇರುವುದು ಇನ್ನೂ ಮುಂದುವರೆಯುತ್ತದೆ ಎಂದಿದ್ದಾರೆ.
ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ ಏಕರೂಪ ನಾಗರಿಕ ಸಂಹಿತೆ ಕಾಯ್ಡೆ ಜಾರಿಯಾಗಬಹುದು ಎಂದಿದ್ದಾರೆ. ಆಗಸ್ಟ್ ತಿಂಗಳಲ್ಲಿ ಏಕ ರೂಪ ನಾಗರಿಕ ಸಂಹಿತೆ ವಿಷಯವಾಗಿ ದೆಹಲಿಯಲ್ಲಿ ಭಾರೀ ಆತಂಕದ ಸನ್ನಿವೇಶ ಕಾಣಿಸಿಕೊಳ್ಳಲಿದೆ ಎಂದಿದ್ದಾರೆ. ಇನ್ನು ಪಾಕಿಸ್ತಾನ ಗಡಿಯಲ್ಲಿ ಘರ್ಷಣೆ ನಡೆಯಲಿದೆ. ಚೀನಾ ಸಹ ಭಾರತದೊಂದಿಗಿನ ಗಡಿ ಒಪ್ಪಂದಗಳನ್ನು ಮುರಿದು ಆಕ್ರಮಣ ಮಾಡಲಿದೆಯಂತೆ. ಗಡಿ ವಿಚಾರವಾಗಿಯೇ ಭಾರತ ಮತ್ತು ಚೀನಾ ಮಧ್ಯೆ ಉದ್ವಿಗ್ನ ಪರಿಸ್ಥಿತಿ, ಆತಂಕ ಸ್ಥಿತಿ ತಲೆದೋರಬಹುದು.
ಮಾರ್ಚ್ ತಿಂಗಳಲ್ಲಿ ಹದಿನೈದು ದಿನದಲ್ಲಿ ಎರಡು ಗ್ರಹಣ ಆಗಲಿದ್ದು, ಇದರಿಂದ ಭಾರತವೂ ಒಳಗೊಂಡಂತೆ ಇಡೀ ಜಗತ್ತಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ. ಮಾಧ್ಯಮದವರ ಮೇಲೆ ಹಿಂಸಾಕೃತ್ಯಗಳು ನಡೆಯಲಿವೆಯಂತೆ. ಪ್ರವಾಹ, ನೈಸರ್ಗಿಕ ವಿಕೋಪಗಳಿಂದ ಬಹಳ ದೊಡ್ಡ ಸಂಖ್ಯೆಯಲ್ಲಿ ಜೀವಹಾನಿ ಆಗಲಿದೆ. ಕಳೆದ ವರ್ಷಕ್ಕಿಂತ ಮೇಘ ಸ್ಫೋಟ ಹಾಗೂ ಭೂ ಕುಸಿತಗಳು ಭಾರತದಲ್ಲಿ ಹೆಚ್ಚಾಗಲಿವೆಯಂತೆ.
ಭಾರತದ ಅತ್ಯುನ್ನತ ಸ್ಥಾನದಲ್ಲಿ ಇರುವ ಇಬ್ಬರ ಸಾವು ಆಗುವ ಸಾಧ್ಯತೆಗಳಿವೆ. ಆ ಪೈಕಿ ಒಂದು ಹಿಂಸಾಚಾರದ ಕಾರಣದಿಂದ ಆಗುವ ಸಂಭವವಿದೆ. ಷೇರು ಮಾರುಕಟ್ಟೆ ಸುಧಾರಿಸಲಿದೆ ಹಾಗೂ ಆರಂಭದಲ್ಲಿ ಚಿನ್ನದ ಸಂಗ್ರಹದಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆಗಳಿವೆ. ಶನಿ ಗ್ರಹದ ಸ್ಥಿತಿಯಿಂದ ಕಾರ್ಮಿಕ ಸಮಸ್ಯೆಗಳು ತಲೆದೋರಿ, ಕನಿಷ್ಠ ಎರಡು ದೊಡ್ಡ ಉದ್ಯಮಗಳು ಬಾಗಿಲು ಮುಚ್ಚುವ ಅಪಾಯವಿದೆ.
ಕೆಟ್ಟ ಕಾರಣಗಳಿಂದಾಗಿ ಅಯೋಧ್ಯೆ ಸುದ್ದಿಯಲ್ಲಿರುತ್ತದೆ. ದೆಹಲಿಯಲ್ಲಿ ವಿನಾಶಕಾರಿ ಮಾರುತ ಹಾಗೂ ಮಳೆ ಕಾಣಿಸಿಕೊಳ್ಳಲಿದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಭಾರತವನ್ನು ಕಾಡಲಿದೆ. ಮಧ್ಯಮ ವರ್ಗದ ಜನರ ಖರೀದಿ ಸಾಮರ್ಥ್ಯ ಹೆಚ್ಚಾಗಲಿದೆ. ಭಾರತದಲ್ಲಿ ಕನಿಷ್ಠ ಎರಡು ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳ ಹಗರಣ ಹೊರಬರಲಿದೆ. ಇನ್ನು ಒಬ್ಬ ಲೇಖಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಬರಲಿದೆಯಂತೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಚೀನಾ ಈ ಮೂರರಿಂದಲೂ ಭಾರತ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದು ಕಠಿಣ ಸೇನಾ ಕಾರ್ಯಾಚರಣೆಗಳಿಗೆ ದಾರಿ ಮಾಡಿಕೊಡಲಿದೆ.
ದೇಶದ ಅತಿ ದೊಡ್ಡ ನಾಯಕರೊಬ್ಬರ ಮೇಲೆ ಹಿಂಸಾ ಕೃತ್ಯ, ದಾಳಿ ನಡೆಯುವ ಸಾಧ್ಯತೆ ಬಹಳ ಹೆಚ್ಚಿದೆ. ಆ ಸಂದರ್ಭದಲ್ಲಿ ಎಲ್ಲ ಪ್ರಮುಖ ರಾಜಕೀಯ ನಾಯಕರಿಗೆ ಭದ್ರತಾ ವ್ಯವಸ್ಥೆ ಹೆಚ್ಚಿಸುವುದು ಕ್ಷೇಮ. ಈ ಅಪಾಯಕಾರಿ ಅವಧಿ ಮುಗಿದರೂ ಕೇಂದ್ರದ ಮೇಲಿನ ದಾಳಿ ಸಾಧ್ಯತೆ ಹಾಗೇ ಮುಂದುವರಿಯಲಿದೆ. ಈ ವರ್ಷದ ಏಪ್ರಿಲ್- ಮೇ ತಿಂಗಳಿಂದ ಅಕ್ಟೋಬರ್ ವರೆಗೆ ಈ ದೇಶದ ಪ್ರಧಾನಿ ಅವರ ಭದ್ರತೆ ಹೆಚ್ಚಿಸಿಕೊಳ್ಳಬೇಕು. ರಾಜಕೀಯವಾಗಿಯೂ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೇನು ಅನಾಹುತಗಳು ಕಾದಿವೆ ಗೊತ್ತಾ..?
ಮಾರ್ಚ್ 14 ಸಂಭವಿಸುವ ಗ್ರಹಣದಿಂದಾಗಿ ಟರ್ಕಿ- ಟೋಕಿಯೋದಲ್ಲಿ ಭೂಕಂಪನವೂ ಒಳಗೊಂಡಂತೆ ಪರಿಸರ ವಿಕೋಪಗಳು ಸಂಭವಿಸಬಹುದು. ಹೆಚ್ಚಿನ ಸಾವು-ನೋವುಗಳಾಗುತ್ತವೆ. ವ್ಯಾಟಿಕನ್ ಸಿಟಿಯಿಂದ ಕೆಟ್ಟ ಸುದ್ದಿ ಬರಬಹುದು. ಉತ್ತರ ಕೊರಿಯಾದ ಆಕ್ರಮಣಕಾರಿ ಧೋರಣೆ ಜಾಗತಿಕವಾಗಿ ಆತಂಕಕ್ಕೆ ಕಾರಣವಾಗಲಿದೆ ಎಂದು ಬರೆದಿದ್ದಾರೆ.
ಮಾರ್ಚ್ 29ರಂದೂ ಕೂಡ ಗ್ರಹಣ ಇದ್ದು, ಉಕ್ರೇನ್- ರಷ್ಯಾ ಮಧ್ಯದ ಯುದ್ಧ ತಾರಕಕ್ಕೆ ಏರುತ್ತದೆ. ಉಕ್ರೇನ್‌ನ ಝೆಲೆನ್ ಸ್ಕಿಗೆ ಹಿನ್ನಡೆ ಆಗುತ್ತದೆ. ಬ್ರೆಜಿಲ್ ನಲ್ಲಿ ಪ್ರಮುಖ ಭೂಕಂಪನ ಆಗಬಹುದು. ಕೆನಡಾ ದೇಶಕ್ಕೆ ಸಂಕಷ್ಟ ಎದುರಾಗಲಿದೆಯಂತೆ. ಫ್ರಾನ್ಸ್ ದೇಶಕ್ಕೆ ಭಯೋತ್ಪಾದಕರ ಆತಂಕ ತಟ್ಟಲಿದೆಯಂತೆ. ಜರ್ಮನಿಯಲ್ಲಿಯೂ ಭಯೋತ್ಪಾದನೆ ಆತಂಕ ಕಾಣಿಸಿಕೊಳ್ಳಲಿದೆ. ಒಟ್ಟಾರೆ ಯುರೋಪಿಯನ್ ದೇಶಗಳ ಮೇಲೆ ಭಯೋತ್ಪಾದಕರಿಂದ ದಾಳಿಗಳಾಗಲಿವೆ.
ರಷ್ಯಾದ ಅಧ್ಯಕ್ಷ ಪುಟಿನ್ ಮೇಲೆ ಹಿಂಸಾತ್ಮಾಕ ದಾಳಿ ಪ್ರಯತ್ನ ಆಗಬಹುದು. ವಲಸಿಗರ ಮೇಲಿನ ಸಿಟ್ಟಿನಿಂದ ಅಮೆರಿಕದಲ್ಲಿ ಭಾರೀ ಹಿಂಸಾಚಾರದ ಸಾಧ್ಯತೆಗಳಿವೆ. ಅಟ್ಲಾಂಟಿಕ್ ಹಾಗೂ ಆರ್ಟಿಕ್ ಸಾಗರದಲ್ಲಿ ದೊಡ್ಡ ಗ್ಲೇಷಿಯರ್ ಕರಗುವ ಸಾಧ್ಯತೆ ಇದೆ. ಸೆಪ್ಟೆಂಬರ್ ನಲ್ಲಿ ನಡೆಯುವ ಗ್ರಹಣದಿಂದ ಮ್ಯಾನ್ಮಾರ್ ನಲ್ಲಿ ಭಾರೀ ಹಿಂಸಾಚಾರ – ರಕ್ತಪಾತ ನಡೆಯುತ್ತದೆ. ಇನ್ನು ಆಂಗ್ ಸುನ್ ಸೂ ಕಿ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದಿದ್ದಾರೆ
ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಹದಗೆಡುತ್ತದೆ. ಕೆಟ್ಟ ಕಾರಣದಿಂದಾಗಿ ಕೋಲ್ಕತ್ತಾ ಸುದ್ದಿಯಲ್ಲಿ ಇರಲಿದೆ. ಫಿಲಿಪೈನ್ಸ್ ನಲ್ಲಿ ಜ್ವಾಲಾಮುಖಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಗಾಜಾದ ಮೇಲಿನ ಇಸ್ರೇಲ್ ಕದನ ವಿರಾಮ ತಾತ್ಕಾಲಿಕವಾಗಿದ್ದು, ಯುದ್ಧ ಮುಂದುವರಿಯಲಿದೆ. ಪಾಕಿಸ್ತಾನದಲ್ಲಿ ನಂಬಲು ಸಾಧ್ಯವಿಲ್ಲದ ಮಟ್ಟಕ್ಕೆ ಸಾಮಾಜಿಕ ಅಶಾಂತಿ ಕಾಣಿಸಿಕೊಳ್ಳಲಿದೆ. ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ತೀವ್ರ ಅಭಾವ ಕಾಣಿಸಿಕೊಳ್ಳುತ್ತದೆ.
ಅಮೆರಿಕವು ತನ್ನ ವಿದೇಶಿ ನೀತಿಗಳ ಕಾರಣಕ್ಕೆ ಭಾರೀ ಟೀಕೆಗೆ ಗುರಿ ಆಗಲಿದೆ. ಯುನೈಟೆಡ್ ಕಿಂಗ್ ಡಂನಲ್ಲಿ ಪ್ರಮುಖ ವ್ಯಕ್ತಿಗಳು ಸಾವನ್ನಪ್ಪುತ್ತಾರಂತೆ. ಇನ್ನು ವರ್ಷಾಂತ್ಯದ ವೇಳೆಗೆ ತಾಲಿಬಾನ್ ನಿಂದ ಹಿಂಸಾಚಾರಗಳು, ದಾಳಿಗಳು ವಿಪರೀತ ಹೆಚ್ಚಾಗಲಿದೆ. ಜರ್ಮನಿ ಹಾಗೂ ಫ್ರಾನ್ಸ್ ಭಾರೀ ಎಚ್ಚರಿಕೆ ವಹಿಸಬೇಕಾಗುತ್ತದೆ. ಭಯೋತ್ಪಾದನೆಯಿಂದ ಈ ದೇಶಗಳಿಗೆ ಅತಿ ಹೆಚ್ಚು ಸಮಸ್ಯೆಗಳಾಗುತ್ತವೆಯಂತೆ.
ಜೂನ್ ತಿಂಗಳಲ್ಲಿ ಅಮೆರಿಕಾದಲ್ಲಿ ರಾಜಕೀಯ ಚಿತ್ರಣಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ಚೀನಾ ಜಾಗತಿಕ ಮಟ್ಟದಲ್ಲಿ ಬಲಿಷ್ಠ ಆಗಲಿದ್ದು, ಅಮೆರಿಕದ ಜೊತೆಗಿನ ಅದರ ಹಗೆತನ ಹೆಚ್ಚಾಗಿ, ಹೊಸ ಬೆಳವಣಿಗೆಗಳು ಕಾಣುವಂತಾಗುತ್ತವೆ. ವಿಶ್ವಾದ್ಯಂತ ರಾಷ್ಟ್ರಾಧ್ಯಕ್ಷರು, ಪ್ರಧಾನಿಗಳು ಆಂತರಿಕ ಭಿನ್ನಮತೀಯರು ಹಾಗೂ ದಂಗೆಗಳಿಂದ ಸಮಸ್ಯೆಗಳಿಗೆ ಸಿಲುಕಲಿದ್ದಾರೆ. ಭಯೋತ್ಪಾದನಾ ಶಕ್ತಿಗಳು ಒಗ್ಗೂಡಿ ಹೊಸ ಭೂ ಪ್ರದೇಶಗಳಲ್ಲಿ ತಮ್ಮ ಭಯೋತ್ಪಾದನಾ ಚಟುವಟಿಕೆಯನ್ನು ವಿಸ್ತರಿಸಲಿದ್ದಾರೆ. ಬಾಂಗ್ಲಾದೇಶದಲ್ಲಿ ಮೊಹಮದ್ ಯೂನಸ್ ಪ್ರಭಾವ ಮುಗಿಯಲಿದೆ. ಮುಜಿಬುರ್ ರೆಹಮಾನ್ ಅವರ ಬದುಕು ಅಂತ್ಯ ಕಂಡು ರೀತಿಯಲ್ಲಿಯೇ ಶೇಖ್ ಹಸೀನಾರಿಗೂ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ ಮಾರ್ಡನ್ ಅಸ್ಟ್ರಾಲಜರ್ ಗಾಯತ್ರಿ ದೇವಿ ವಾಸುದೇವ್.