ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ ರಾಯಲ್ಸ್ (RR) ನಡುವೆ ಐಪಿಎಲ್ 2025ರ ರೋಚಕ ಟಿ20 ಪಂದ್ಯ ನಡೆಯಲಿದೆ. ಈ ಕಾರಣದಿಂದಾಗಿ ಸಂಜೆಯ ವೇಳೆಗೆ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ. ವಾಹನ ಸವಾರರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣ ಯೋಜನೆಯನ್ನು ರೂಪಿಸುವುದು ಉತ್ತಮ.
ಸಂಚಾರ ದಟ್ಟಣೆಯ ಸಾಧ್ಯತೆ ಎಲ್ಲೆಲ್ಲಿ?
ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ರಾಜಭವನ ರಸ্তೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರ್ಬಾ ರಸ್ತೆ, ಅಂಬೇಡ್ಕರ್ ವೀಧಿ, ಟ್ರಿನಿಟಿ ಜಂಕ್ಷನ್, ಲ್ಯಾವೆಲ್ಲೆ ರಸ್ತೆ, ವಿಠಲ್ ಮಲ್ಯ ರಸ್ತೆ, ಮತ್ತು ನೃಪತುಂಗ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆಯಾಗುವ ನಿರೀಕ್ಷೆಯಿದೆ.
ಪಾರ್ಕಿಂಗ್ ವ್ಯವಸ್ಥೆ
ಈ ಹಿಂದಿನ ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ, ಪಂದ್ಯ ವೀಕ್ಷಕರಿಗಾಗಿ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್, ಯು.ಬಿ.ಸಿಟಿ ನಿಲುಗಡೆ ಸ್ಥಳ, ಮತ್ತು ಶಿವಾಜಿನಗರ ಬಸ್ ನಿಲ್ದಾಣದ ಮೊದಲನೇ ಮಹಡಿಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆ.ಎಸ್.ಸಿ.ಎ. ಸದಸ್ಯರ ವಾಹನಗಳಿಗೆ ಸೆಂಟ್ ಜೋಸೆಫ್ ಬಾಲಕರ ಶಾಲೆಯ ಮೈದಾನದಲ್ಲಿ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿತ್ತು. ಈ ಬಾರಿಯೂ ಇದೇ ರೀತಿಯ ವ್ಯವಸ್ಥೆಯನ್ನು ಮುಂದುವರೆಸುವ ಸಾಧ್ಯತೆಯಿದೆ.
ಮೆಟ್ರೋ ಸೇವೆ ವಿಸ್ತರಣೆ
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಐಪಿಎಲ್ ಪಂದ್ಯದ ದಿನ ಮೆಟ್ರೋ ಸೇವೆಯನ್ನು ರಾತ್ರಿ 12:30ರ ವರೆಗೆ ವಿಸ್ತರಿಸಿದೆ. ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ, ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ರಾತ್ರಿ 12:30ಕ್ಕೆ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣದಿಂದ ಎಲ್ಲ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ಮಧ್ಯರಾತ್ರಿ 1:15ಕ್ಕೆ ಲಭ್ಯವಿರಲಿದೆ ಎಂದು BMRCL ತಿಳಿಸಿದೆ.
RCBಯ ಪ್ರದರ್ಶನ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಐದರಲ್ಲಿ ಜಯ ಗಳಿಸಿದೆ. ಆದರೆ, ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲಿ ಸೋಲನುಭವಿಸಿದೆ. ಇಂದಿನ ಪಂದ್ಯದಲ್ಲಿ RCB ತವರಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.