ಸತತ ಐದು ಸೋಲುಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ವಿಜಯದ ಹಾದಿಗೆ ಮರಳಿದೆ. ಲಖನೌದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್ ಗಳ ರೋಚಕ ಜಯ ಸಾಧಿಸಿದ ಸಿಎಸ್‌ಕೆ, ಈ ವರ್ಷದ ಟೂರ್ನಿಯಲ್ಲಿ ತನ್ನ 2ನೇ ಗೆಲುವು ದಾಖಲಿಸಿದೆ.
ಲಖನೌ ನೀಡಿದ್ದ 167 ರನ್‌ಗಳ ಗುರಿಯತ್ತ ಬೆನ್ನಟ್ಟಿದ ಸಿಎಸ್‌ಕೆ ಆರಂಭದಲ್ಲಿ ಉತ್ತಮ ಆಟವಾಡಿತು. ಇಂದೆ ತಂಡಕ್ಕೆ ಆಯ್ಕೆಯಾಗಿದ್ದ ಶೇಖ್ ರಶೀದ್ ಹಾಗೂ ರಚಿನ್ ರವೀಂದ್ರ ಮೊದಲ ವಿಕೆಟ್‌ಗೆ 52 ರನ್ ಕಲೆಹಾಕಿದರು. ರಶೀದ್ 19 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 27 ರನ್ ಗಳಿಸಿದರು. ಆದರೆ ಈ ಯಶಸ್ಸಿನ ನಂತರ, ಸಿಎಸ್‌ಕೆ ತಕ್ಷಣದ ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತು. ತ್ರಿಪಾಠಿ ಕೇವಲ 9 ರನ್‌ಗಳಿಗೆ ಔಟ್ ಆದರೆ, ಜಡೇಜಾ ಕೂಡ 7 ರನ್ ಗಳಿಸಿ ನಿರ್ಗಮಿಸಿದರು. ವಿಜಯ್ ಶಂಕರ್ ಕೂಡ 9 ರನ್‌ಗೆ ವಿಕೆಟ್ ಒಪ್ಪಿಸಿದರು.
ಈ ಪರಿಸ್ಥಿತಿಯಲ್ಲಿ, ಅನುಭವಿ ನಾಯಕ ಧೋನಿ ರೋಚಕ ಆಟವಾಡಿದರು. ಚೆನ್ನೈ ಪರ ಧೋನಿ ಹಾಗೂ ಶಿವಂ ದುಬೆ ಅಂತಿಮ ಓವರ್‌ಗಳಲ್ಲಿ ಗುರಿ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ಧೋನಿ ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 26 ರನ್ ಗಳಿಸಿದರು. ದುಬೆ 37 ಎಸೆತಗಳಲ್ಲಿ 43 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟಾಸ್ ಗೆದ್ದು ಮೊದಲು ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಲಖನೌ ಆರಂಭದಲ್ಲೇ ಐಡೆನ್ ಮಾರ್ಕ್ರಮ್ (6) ಮತ್ತು ನಿಕೋಲಸ್ ಪೂರನ್ (8) ರನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು. ಬಳಿಕ ನಾಯಕ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಷ್ ಮಧ್ಯದ ಭಾಗದಲ್ಲಿ ನಿರ್ವಹಣಾ ಆಟವಾಡಿದರು. ಮಾರ್ಷ್ 30 ರನ್ ಗಳಿಸಿ ಔಟ್ ಆದರೂ, ಪಂತ್ ತಮ್ಮ ಅಜೇಯ 70 ರನ್‌ಗಳ ಕೊಡುಗೆಯಿಂದ ತಂಡವನ್ನು 170 ರನ್‌ಗಳ ದಡ ಸೇರಿಸಿದರು. ಅಬ್ದುಲ್ ಸಮದ್ ಕೂಡ 30 ರನ್ ಗಳಿಸಿ ಪಂತ್‌ಗೆ ಉತ್ತಮ ಬೆಂಬಲ ನೀಡಿದರು.
ಸಿಎಸ್‌ಕೆ ಈ ಪಂದ್ಯಕ್ಕೆ ಎರಡು ಬದಲಾವಣೆಗಳನ್ನು ಮಾಡಿದ್ರೆ, ಲಖನೌ ಒಂದೇ ಬದಲಾವಣೆಯನ್ನು ಮಾಡಿತು. ಆರ್ ಅಶ್ವಿನ್ ಮತ್ತು ಡೆವೊನ್ ಕಾನ್ವೇ ಅವರನ್ನು ಬಿಡಲಾಗಿದ್ದು, ಜೇಮೀ ಓವರ್ಟನ್ ಮತ್ತು ಶೇಖ್ ರಶೀದ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ.
ಈ ಗೆಲುವು ಸಿಎಸ್‌ಕೆಗೆ ಕೇವಲ ಅಂಕಗಳಷ್ಟೆ ಅಲ್ಲ, ಆತ್ಮವಿಶ್ವಾಸವನ್ನೂ ನೀಡಿದಂತಾಗಿದೆ. ಧೋನಿ ಅವರು ಇನ್ನೊಮ್ಮೆ ತಮ್ಮ ಮಾಂತ್ರಿಕ ನಾಯಕತ್ವದಿಂದ ಪಂದ್ಯವನ್ನು ಗೆಲ್ಲುವ ದಿಕ್ಕಿಗೆ ತಿರುಗಿಸಿ, ಅಭಿಮಾನಿಗಳಿಗೆ ವಿಜಯದ ಉತ್ಸವ ಉಣಬಡಿಸಿದ್ದಾರೆ.