ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿ-ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದು ಬೀಗಿದೆ. ಈ ಮೂಲಕ ವಿಶ್ವಕಪ್ ಫೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಭಾರತ ಎಲ್ಲ ವಿಭಾಗಗಳಲ್ಲಿ ಆಸ್ಟ್ರೇಲಿಯಾಗಿಂತಾ ಉತ್ತಮ ಪ್ರದರ್ಶನ ತೋರುವ ಮೂಲಕ ಆಸಿಸ್ ವಿರುದ್ಧ ಜಯ ಸಾಧಿಸಿದೆ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ-ಪಾಕ್ ಪಂದ್ಯದ ನಂತರ ಅತಿದೊಡ್ಡ ಹೈವೋಲ್ಟೇಜ್ ಮ್ಯಾಚ್ ಅಂತಾ ಮೊದಲ ಸೆಮಿ ಫೈನಲ್ ಕ್ರೇಜ್ ಕ್ರಿಯೇಟ್ ಮಾಡಿತ್ತು. ಎಲ್ಲರ ನಿರೀಕ್ಷೆಯಂತೆಯೇ ಮೊದಲ ಸೆಮಿ ಫೈನಲ್ ಜಿದ್ದಾಜಿದ್ದಿನಿಂದ ಕೂಡಿತ್ತು. ದುಬೈನಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಆಯ್ದುಕೊಂಡ್ರು. ಟಾಸ್ ಸೋತ ಬಳಿಕ ಮಾತನಾಡಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಟಾಸ್ ಗೆದ್ದರೆ ಏನು ಮಾಡಬೇಕು ಅನ್ನೋ ದ್ವಂದ್ವ ಇತ್ತು. ಟಾಸ್ ಸೋತ ಬಳಿಕ ಮನಸ್ಸು ನಿರಾಳವಾಗಿದೆ ಅಂತಾ ಹೇಳಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ ನಾಲ್ಕು ರನ್‌ಗಳಿಗೆ ಆರಂಭಿಕ ಆಟಗಾರ ಕೂಪರ್ ಕಾನೊಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಜೊತೆಯಾದ ಟ್ರಾವಿಸ್ ಹೆಡ್ ಮತ್ತು ನಾಯಕ ಸ್ಮಿತ್ ಆಸ್ಟ್ರೇಲಿಯಾವನ್ನ ಸಂಕಷ್ಟದಿಂದ ಪಾರು ಮಾಡೋಕೆ ಶುರು ಮಾಡಿದರು. ಇಬ್ಬರೂ ಎರಡನೇ ವಿಕೆಟ್‌ಗೆ 50 ರನ್ ಪೇರಿಸಿದರು. ಈ ವೇಳೆ ಟ್ರಾವಿಸ್ ಹೆಡ್ 39 ರನ್ ಗಳಿಸಿ ಔಟ್ ಆದ್ರು. ಹೆಡ್ ಬಳಿಕ ಕ್ರೀಸ್‌ಗೆ ಬಂದ ಮಾರ್ನಸ್ ಲಬುಶೇನ್, ಆಸ್ಟ್ರೇಲಿಯಾ ನಾಯಕ ಸ್ಮಿತ್ ಜೊತೆ 56 ರನ್ ಜೊತೆಯಾಟವಾಡಿದ್ರು. ತಂಡದ ಮೊತ್ತ 110 ರನ್ ಆಗಿದ್ದಾಗ ಲಬುಶೇನ್ 36 ರನ್ ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಬಂದ ಜೋಶ್ ಇಂಗ್ಲಿಸ್ ವೇಗವಾಗಿ ರನ್ ಗಳಿಸೋ ಆತುರಕ್ಕೆ ಬಿದ್ದು ವಿಕೆಟ್ ಒಪ್ಪಿಸಿದರು.
ಒಂದು ಕಡೆ ಸ್ಮಿತ್ ನೆಲಕಚ್ಚಿ ಆಡುವ ಮೂಲಕ ತಂಡಕ್ಕೆ ಆಸರೆಯಾಗಲು ಪ್ರಯತ್ನ ನಡೆಸ್ತಿದ್ದರು. ಆಗ ಇವರಿಗೆ ಜೊತೆಯಾದ ಅಲೆಕ್ಸ್ ಕೇರಿ, ನಾಯಕನಿಗೆ ಬೆಂಬಲ ನೀಡುವಂತಾ ಆಟ ಆಡಿದ್ರು. ಇಬ್ಬರೂ ಸೇರಿ 54 ರನ್‌ಗಳನ್ನ ಕಲೆ ಹಾಕಿದ್ದ ವೇಳೆ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದ ಸ್ಮಿತ್ 73 ರನ್ ಗಳಿಸಿ ಔಟಾದರು. ಇದಾದ ಬಳಿಕ ಆಸ್ಟ್ರೇಲಿಯಾ ಚೇತರಿಸಿಕೊಳ್ಳಲೇ ಇಲ್ಲ. ಸ್ಮಿತ್ ಬಳಿಕ ಬಂದ ಮ್ಯಾಕ್ಸ್‌ವೆಲ್, ಬೆನ್ ಡ್ವಾರ್ಷುಯಸ್, ಆ್ಯಡಂ ಜಂಪಾ, ನಾಥನ್ ಎಲ್ಲಿಸ್ ಎಲ್ಲರೂ ದೊಡ್ಡ ಹೊಡೆತಗಳಿಗೆ ಪ್ರಯತ್ನಿಸಿ ಔಟಾದರು. ಮತ್ತೊಂದೆಡೆ ಆಸ್ಟ್ರೇಲಿಯಾಗೆ ಆಸರೆಯಾಗಿದ್ದ ಅಲೆಕ್ಸ್ ಕೇರಿ 61 ರನ್ ಗಳಿಸಿ ರನ್ ಔಟ್ ಆದ್ರು. ಇಲ್ಲದ ರನ್ ಕದಿಯಲು ಹೋಗಿ ವಿಕೆಟ್ ಒಪ್ಪಿಸಿದ್ರು. ಕೊನೆಗೆ ಆಸ್ಟ್ರೇಲಿಯಾ 264 ರನ್‌ಗಳಿಗೆ ಆಲೌಟ್ ಆಗಿ, ಭಾರತಕ್ಕೆ 265 ರನ್‌ಗಳ ಟಾರ್ಗೆಟ್ ನೀಡಿತು. ಭಾರತದ ಪರ ಮೊಹಮ್ಮದ್ ಶಮಿ 3, ಜಡೇಜಾ, ವರುಣ್ ಚಕ್ರವರ್ತಿ ತಲಾ 2, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದು ಮಿಂಚಿದ್ರು.
ಆಸ್ಟ್ರೇಲಿಯಾ ನೀಡಿದ್ದ ಟಾರ್ಗೆಟ್ ಬೆನ್ನತ್ತಿದ ಭಾರತಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಭಾರತದ ಓಪನಿಂಗ್ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಅದ್ರಲ್ಲೂ ರೋಹಿತ್ ಶರ್ಮಾ ಪವರ್‌ಪ್ಲೇನಲ್ಲಿ ಸಾಧ್ಯವಾದಷ್ಟು ಬೇಗ ರನ್ ಕಲೆ ಹಾಕೋಕೆ ಪ್ರಯತ್ನಿಸಿದ್ರು. ಭಾರತ 30 ರನ್ ಗಳಿಸಿದ್ದಾಗ ಶುಭಮನ್ ಗಿಲ್ ಇನ್‌ಸೈಡ್ ಎಡ್ಜ್ ಮಾಡಿಕೊಂಡು ಬೌಲ್ಡ್ ಆದ್ರು. ವೇಗವಾಗಿ ರನ್ ಗಳಿಸುತ್ತಿದ್ದ ರೋಹಿತ್ ಶರ್ಮಾ ಸ್ವೀಪ್ ಮಾಡಲು ಹೋಗಿ 28 ರನ್‌ಗಳಿಗೆ ಔಟ್ ಆದ್ರು. ಆಗ ತಂಡದ ಮೊತ್ತ ಕೇವಲ 43 ರನ್. ಈ ವೇಳೆ ಜೊತೆಯಾದ ಚೇಸ್ ಮಾಸ್ಟರ್ ಕೊಹ್ಲಿ, ಶ್ರೇಯಸ್ ಅಯ್ಯರ್ ನಿಧಾನವಾಗಿ ತಂಡದ ಮೊತ್ತವನ್ನ ಹೆಚ್ಚಿಸಲು ಶುರು ಮಾಡಿದ್ರು. ಇಬ್ಬರೂ ಸೇರಿ ಮೂರನೇ ವಿಕೆಟ್‌ಗೆ 91 ರನ್ ಕಲೆ ಹಾಕಿ ಭಾರತಕ್ಕೆ ಉತ್ತಮ ಅಡಿಪಾಯ ಹಾಕಿದ್ರು. ಆದ್ರೆ, ಶ್ರೇಯಸ್ ಅಯ್ಯರ್ 45 ರನ್ ಗಳಿಸಿದ್ದಾಗ ಆ್ಯಡಂ ಜಂಪಾ ಬೌಲಿಂಗ್‌ನಲ್ಲಿ ಬೌಲ್ಡ್ ಆದ್ರು. ಇದಾದ ಬಳಿಕ ಕೊಹ್ಲಿ, ಅಕ್ಷರ್ ಪಟೇಲ್, ಕೆ.ಎಲ್.ರಾಹುಲ್ ಭಾರತ ಗುರಿ ಮುಟ್ಟಲು ನೆರವಾದರು.
ಶುಭಮನ್ ಗಿಲ್, ಜಡೇಜಾ ಹೊರತು ಪಡಿಸಿ ಭಾರತದ ಎಲ್ಲ ಬ್ಯಾಟರ್‌ಗಳು ಎರಡಂಕಿ ಮೊತ್ತ ಗಳಿಸಿದರು. ಅಕ್ಷರ್ ಪಟೇಲ್ 27 ರನ್ ಗಳಿಸಿದ್ರೆ, ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ 28 ರನ್ ಗಳಿಸಿ ತಂಡ ಗೆಲುವಿನ ದಡ ಸೇರುವಲ್ಲಿ ತಮ್ಮ ಪಾತ್ರ ನಿಭಾಯಿಸಿದ್ರು. ಆದ್ರೆ, ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಚೆಲ್ಲಿದರು. ಹಾರ್ದಿಕ್ ಬಳಿಕ ಕ್ರೀಸ್‌ಗೆ ಬಂದ ಜಡೇಜಾ ತಂಡ ಯಾವುದೇ ತೊಂದರೆ ಇಲ್ಲದೇ ಗುರಿ ಮುಟ್ಟುವಂತೆ ನೋಡಿಕೊಂಡ್ರು. ಪಂದ್ಯದ ಬಿಗ್ಗೆಸ್ಟ್ ಹೈಲೈಟ್ ಅಂದ್ರೆ ಕೆ.ಎಲ್.ರಾಹುಲ್. ಅಕ್ಷರ್ ಪಟೇಲ್ ವಿಕೆಟ್ ಪತನದ ಬಳಿಕ ಬಂದ ರಾಹುಲ್ ಫಿನಿಷರ್ ಕೆಲಸವನ್ನ ಅದ್ಭುತವಾಗಿ ನಿಭಾಯಿಸಿದ್ರು. ಕೊನೆಗೆ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸೋ ಮೂಲಕ ಭಾರತ ಸುಲಭವಾಗಿ ಗುರಿ ಮುಟ್ಟಲು ನೆರವಾದರು.
ವಿಶ್ವಕಪ್ ಫೈನಲ್ ಪಂದ್ಯದ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿದೆ. ಭಾರಿ ಜೋಷ್‌ನಲ್ಲಿ ಸೆಮಿ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದ ಆಸ್ಟ್ರೇಲಿಯಾಗೆ ಮನೆ ದಾರಿ ತೋರಿಸಿದೆ. ಇದರ ಜೊತೆಗೆ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್‌ಗಳಲ್ಲಿ ಒಂದೇ ಒಂದು ಬಾರಿಯೂ ಸೋತಿಲ್ಲ ಅನ್ನೋ ದಾಖಲೆಯನ್ನ ಭಾರತ ಮುಡಿಗೇರಿಸಿಕೊಂಡು, ಫೈನಲ್‌ಗೆ ಬರ್ತ್ ಫೈನಲ್ ಮಾಡಿಕೊಂಡಿದೆ.