ಟೀಂ ಇಂಡಿಯಾ ಐಸಿಸಿ ನಡೆಸುವ ಟೂರ್ನಿಗಳಲ್ಲಿ ಭಾನುವಾರ ಫೈನಲ್ ನಡೆದರೆ ಹಲವಾರು ಬಾರಿ ಸೋತಿದೆ. ಇದುವರೆಗೆ ಒಂದೇ ಒಂದು ಬಾರಿ ಭಾನುವಾರ ನಡೆದ ಫೈನಲ್‌ನಲ್ಲಿ ಗೆದ್ದಿದೆ. ಆದರೆ, ಅದು ಕೂಡ ಭಾನುವಾರ ಶುರುವಾಗಿ ಭಾರಿ ಮಳೆಯಿಂದ ಸೋಮವಾರಕ್ಕೆ ಮುಂದೂಡಿಕೆಯಾಗಿತ್ತು. 2000ನೇ ವರ್ಷದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಕೂಡ ಭಾನುವಾರ ನಡೆದಿತ್ತು. ಇದೇ ನ್ಯೂಜಿಲೆಂಡ್ ತಂಡ ಎದುರಾಳಿಯಾಗಿತ್ತು. ಆ ಪಂದ್ಯದಲ್ಲಿ ಭಾರತ ಸೋತಿತ್ತು.
ಇದೇ ರೀತಿ 2003, 2023ರ ವರ್ಲ್ಡ್ ಕಪ್ ಫೈನಲ್ ಕೂಡ ಭಾನುವಾರ ನಡೆದಿತ್ತು. ಆಗಲೂ ಭಾರತ ಸೋತಿತ್ತು. ಎರಡೂ ಬಾರಿ ಆಸ್ಟ್ರೇಲಿಯಾ ಭಾರತಕ್ಕೆ ಎದುರಾಳಿಯಾಗಿತ್ತು. 2014ರ ಟಿ-20 ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಕೂಡ ಭಾನುವಾರ ಇತ್ತು. ಆಗಲೂ ಭಾರತ ಸೋತಿತ್ತು. ಹೀಗಾಗಿ ಈ ಬಾರಿಯಾದರೂ ಭಾರತ ಭಾನುವಾರದ ಕಂಟಕವನ್ನು ಕಳೆದುಕೊಳ್ಳಲಿದೆಯಾ ಎಂಬ ಪ್ರಶ್ನೆ ಉಳಿದು ಕೊಂಡಿದೆ.
ಮಾರ್ಚ್ 9, 2025. ಭಾನುವಾರ. ಟೀಂ ಇಂಡಿಯಾ ಅಭಿಮಾನಿಗಳು ಸೇರಿ ಭಾರತೀಯರೆಲ್ಲರೂ ಈ ದಿನಕ್ಕಾಗಿ ಕಾದು ಕುಳಿತಿದ್ದಾರೆ. ಏಕೆಂದರೆ, ಭಾನುವಾರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಡೆಯಲಿದೆ. ಈ ಫೈನಲ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಟ್ರೋಫಿ ಮುಡಿಗೇರಿಸಿಕೊಳ್ಳಲು ಸೆಣಸಾಡಲಿವೆ. ಟೀಂ ಇಂಡಿಯಾ ಮೇಲೆ ಗೆಲ್ಲಲೇಬೇಕಾದ ಒತ್ತಡ ಇದೆ.
ಟ್ವೆಂಟಿ ಟ್ವೆಂಟಿಯಲ್ಲಿ ವಿಶ್ವಕಪ್ ಮುಡಿಗೇರಿಸಿಕೊಂಡಿರುವ ಭಾರತ, ಮತ್ತೊಂದು ಐಸಿಸಿ ಟ್ರೋಫಿಯನ್ನು ಮಡಿಲಿಗೆ ಹಾಕಿಕೊಳ್ಳಲು ತಯಾರಾಗಿದೆ. ಹೀಗೆಂದು ಎದುರಾಳಿಯಾಗಿರುವ ನ್ಯೂಜಿಲೆಂಡ್ ತಂಡ ಸಾಮಾನ್ಯ ತಂಡವೇನು ಅಲ್ಲ. ಕೇನ್ ವಿಲಿಯಮ್ಸನ್, ಡಿವೋನ್ ಕಾನ್ವೆ, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಫ್ಸ್, ರಾಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್ ಸೇರಿದಂತೆ ಘಟಾನುಘಟಿ ಆಟಗಾರರೇ ಇದ್ದಾರೆ.
ಒಂದೆಡೆ ನ್ಯೂಜಿಲೆಂಡ್ನ ಘಟಾನುಘಟಿ ಆಟಗಾರರನ್ನು ಎದುರಿಸಬೇಕಾದ ಒತ್ತಡದಲ್ಲಿರುವ ಭಾರತಕ್ಕೆ.. ಇನ್ನೊಂದು ಭೂತ ಎದುರಾಗಿದೆ. ಐಸಿಸಿ ನಡೆಸುವ ಟೂರ್ನಿಗಳಲ್ಲಿ ಭಾರತ ಭಾನುವಾರ ನಡೆದಿರುವ ಫೈನಲ್ಗಳಲ್ಲಿ ಇದುವರೆಗೆ ಒಂದು ಬಾರಿಯೂ ಗೆದ್ದಿಲ್ಲ. ಭಾನುವಾರ ನಡೆದಿರುವ ಎಲ್ಲ ಫೈನಲ್ ಪಂದ್ಯಗಳಲ್ಲಿ ಭಾರತ ಸೋತು ಸುಣ್ಣವಾಗಿದೆ. ಭಾರತ ಮೊದಲ ಬಾರಿ 1983ರಲ್ಲಿ ವಿಶ್ವಕಪ್ ಗೆದ್ದು, ಐಸಿಸಿ ನಡೆಸುವ ಟೂರ್ನಿಯ ಮೊದಲ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಆಗ ಶನಿವಾರದಂದು ಫೈನಲ್ ನಡೆದಿತ್ತು. ಇದಾದ ಬಳಿಕ 2002ರಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಆಗ ಸೋಮವಾರದಂದು ಫೈನಲ್ ನಡೆದಿತ್ತು.

2007ರಲ್ಲಿ ನಡೆದಿದ್ದ ಚೊಚ್ಚಲ ಟ್ವೆಂಟಿ ಟ್ವೆಂಟಿ ವಿಶ್ವಕಪ್ನಲ್ಲಿ ಭಾರತ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಆಗಲೂ ಸಹ ಫೈನಲ್ ಪಂದ್ಯವನ್ನು ಸೋಮವಾರದಂದು ಏರ್ಪಡಿಸಲಾಗಿತ್ತು. 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಿದ್ದು ಶನಿವಾರದಂದು. 2024ರಲ್ಲಿ ಭಾರತ ಟ್ವೆಂಟಿ 20 ವಿಶ್ವಕಪ್ ಗೆದ್ದಿದ್ದು ಕೂಡ ಶನಿವಾರದಂದೇ ಎಂಬುದು ವಿಚಿತ್ರವಾದ್ರೂ ಸತ್ಯ.
ಭಾರತ ಇದುವರೆಗೆ ಭಾನುವಾರ ನಡೆದಿರುವ ಐಸಿಸಿ ಟೂರ್ನಿಯ ಫೈನಲ್ನಲ್ಲಿ ಒಂದೇ ಒಂದು ಬಾರಿ ಗೆದ್ದಿದೆ. ಆದರೆ, ಇದಕ್ಕೂ ಒಂದು ಟ್ವಿಸ್ಟ್ ಇದೆ. 2013ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಭಾನುವಾರ ನಡೆದಿತ್ತು. ಈ ಪಂದ್ಯದಲ್ಲಿ ಭಾರತಕ್ಕೆ ಆತಿಥೇಯ ಇಂಗ್ಲೆಂಡ್ ಎದುರಾಳಿಯಾಗಿತ್ತು. ಈ ಪಂದ್ಯದ ಆರಂಭಕ್ಕೆ ಮಳೆರಾಯ ಅಡ್ಡಿಯಾಗಿದ್ದ. ಕೊನೆಗೆ ಏಕದಿನ ಮಾದರಿ ಬದಲು ತಲಾ 20 ಓವರ್ಗಳಿಗೆ ಪಂದ್ಯವನ್ನು ಇಳಿಸಲಾಗಿತ್ತು. ಹೀಗೆ ಪಂದ್ಯ ಆರಂಭವಾದ ಬಳಿಕ ಮತ್ತೆ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಸೋಮವಾರ ಪಂದ್ಯವನ್ನು ಮುಂದುವರಿಸಲಾಗಿತ್ತು. ಭಾನುವಾರ ಪಂದ್ಯ ಶುರುವಾಗಿದ್ದರೂ, ಪಂದ್ಯ ಮುಗಿದಿದ್ದು ಸೋಮವಾರದಂದು. ಹೀಗಾಗಿ ಈ ಭಾನುವಾರದ ಫೈನಲ್ ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ.
1983ರ ಬಳಿಕ ಭಾರತ ಐಸಿಸಿ ನಡೆಸುವ ಟೂರ್ನಿಗಳಲ್ಲಿ ಮೊದಲ ಬಾರಿಗೆ 2000ನೇ ವರ್ಷದಲ್ಲಿ ಫೈನಲ್ ತಲುಪಿತ್ತು. ಆಗ ಕೂಡ ಭಾನುವಾರ ಫೈನಲ್ ಪಂದ್ಯ ನಡೆದಿತ್ತು. ಆಗ ಎದುರಾಳಿಯಾಗಿದ್ದದ್ದು ಕೂಡ ಇದೇ ನ್ಯೂಜಿಲೆಂಡ್. ಮ್ಯಾಚ್ ಫಿಕ್ಸಿಂಗ್ ಹಗರಣ ಬಯಲಾಗಿ ಭಾರತೀಯ ಕ್ರಿಕೆಟ್ಗೆ ಕಳಂಕ ಮೆತ್ತಿಕೊಂಡಿದ್ದ ಕಾಲದಲ್ಲಿ ತಂಡದ ಚುಕ್ಕಾಣಿ ಹಿಡಿದಿದ್ದ ಸೌರವ್ ಗಂಗೂಲಿ ತಂಡಕ್ಕೆ ಹೊಸ ರೂಪ ಕೊಟ್ಟಿದ್ದರು. ಫೈನಲ್ವರೆಗೆ ಬಂದ ಭಾರತ, ನ್ಯೂಜಿಲೆಂಡ್ ಎದುರು ಸೋತು ಹೋಗಿತ್ತು. 2003ರ ವಿಶ್ವಕಪ್ ಫೈನಲ್ ಕೂಡ ಭಾನುವಾರ ನಡೆದಿತ್ತು. ಸುಮಾರು 20 ವರ್ಷಗಳ ಬಳಿಕ ಭಾರತ ಫೈನಲ್ ತಲುಪಿತ್ತು. ಆಗಲೂ ಭಾನುವಾರವೇ ಫೈನಲ್ ನಡೆದಿತ್ತು. ಆಗಲೂ ಭಾರತ ಸೋತು ಹೋಗಿತ್ತು.
2014ರಲ್ಲಿ ಭಾರತ ಎರಡನೇ ಬಾರಿಗೆ ಟ್ವೆಂಟಿ ಟ್ವೆಂಟಿ ವಿಶ್ವಕಪ್ ಫೈನಲ್ ತಲುಪಿತ್ತು. ನೆರೆಯ ದೇಶ ಶ್ರೀಲಂಕಾ ಭಾರತದ ಎದುರಾಳಿಯಾಗಿತ್ತು. ಆಗಲೂ ಭಾನುವಾರವೇ ಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿಯೂ ಭಾರತ ಸೋತು ಹೋಗಿತ್ತು. 2017ರಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಫೈನಲ್ನಲ್ಲಿ ಎದುರಾಗಿತ್ತು.
ಟೂರ್ನಿಯ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಸೆಣೆಸಿ ಗೆದ್ದಿದ್ದ ಭಾರತ, ಭಾನುವಾರದಂದು ನಡೆದ ಫೈನಲ್ನಲ್ಲಿ ಹೀನಾಯವಾಗಿ ಸೋತಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನಕ್ಕೆ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದ್ರು. ಆರಂಭಿಕ ಆಟಗಾರ ಫಖರ್ ಜಮಾನ್ ವಿಕೆಟ್ ಕಬಳಿಸಿದ್ದರು. ಆದರೆ, ಅದು ನೋಬಾಲ್ ಆಗಿತ್ತು. ತಮಗೆ ಸಿಕ್ಕ ಜೀವದಾನವನ್ನು ಬಳಸಿಕೊಂಡ ಫಖರ್ ಜಮಾನ್ ಭಾರತದ ವಿರುದ್ಧ ಅಬ್ಬರಿಸಿದ್ದರು.
ಇದಾದ ಬಳಿಕ 2023ರ ವಿಶ್ವಕಪ್ನಲ್ಲಿ ಅಜೇಯ ತಂಡವಾಗಿ ಭಾರತ ಫೈನಲ್ ಪ್ರವೇಶಿಸಿತ್ತು. ಫೈನಲ್ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿಯಾಗಿತ್ತು. ಅಹಮದಾಬಾದ್ನಲ್ಲಿ ಭಾನುವಾರ ಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿಯೂ ಭಾರತ ಸೋತು, ತೀವ್ರ ನಿರಾಸೆ ಅನುಭವಿಸಿತ್ತು. ಈಗ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರೋ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಕೂಡ ಭಾನುವಾರವೇ ನಡೆಯಲಿದೆ.
ಹೀಗಾಗಿ ಭಾರತಕ್ಕೆ ಕಾಡುತ್ತಿರುವ ಭಾನುವಾರದ ಭೂತದ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಲಿದೆಯಾ ಎಂಬ ಪ್ರಶ್ನೆ ಉಳಿದುಕೊಂಡಿದೆ. ಆದರೆ, ಭಾರತಕ್ಕೆ ಒಂದೇ ಒಂದು ಗುಡ್ ನ್ಯೂಸ್ ಎಂದರೆ, 2021ರ ಬಳಿಕ ದುಬೈನಲ್ಲಿ ನಡೆದಿರುವ ಒಂದೇ ಒಂದು ಪಂದ್ಯದಲ್ಲಿಯೂ ಭಾರತ ಸೋತಿಲ್ಲ. ಒಂದು ಪಂದ್ಯ ಟೈ ಆಗಿದ್ದರೆ, ಉಳಿದೆಲ್ಲಾ ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಹೀಗಾಗಿ ಫೈನಲ್ನಲ್ಲಿ ಯಾರು ಗೆಲ್ಲುತ್ತಾರೆ ಎಂಬ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಚಂದ್ರಮೋಹನ್, ಸ್ಪೆಷಲ್ ಬ್ಯೂರೋ, ಗ್ಯಾರಂಟಿ ನ್ಯೂಸ್.