ಕ್ರಿಕೆಟ್ ಪ್ರಿಯರ ಹೃದಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತನ್ನ 18ನೇ ಆವೃತ್ತಿಯೊಂದಿಗೆ 2025ರಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ರೋಚಕ ಅನುಭವ ನೀಡಲು ಸಜ್ಜಾಗಿದೆ. ಶನಿವಾರ ಮಾರ್ಚ್ 22, 2025 ರಿಂದ ಮೇ 25, 2025 ವರೆಗೆ ನಡೆಯಲಿರುವ ಈ ಟೂರ್ನಿ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತವರು ನೆಲ ಈಡನ್ ಗಾರ್ಡನ್ಸ್‌ನಲ್ಲಿ ಆರಂಭಗೊಂಡು ಅದೇ ಮೈದಾನದಲ್ಲಿ ಭವ್ಯ ಫೈನಲ್‌ಗೆ ಸಾಕ್ಷಿಯಾಗಲಿದೆ. ಈ ವರ್ಷದ ಐಪಿಎಲ್ ಕೇವಲ ಆಟವಲ್ಲ, ಹತ್ತು ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ. ಹೊಸ ನಿಯಮಗಳ ಜೊತೆ ನಡೆಯಲಿರುವ ಈ ಬಾರಿಯ ಟೂರ್ನಿ, ಅಭಿಮಾನಿಗಳಿಗೆ ರೋಮಾಂಚನಕಾರಿ ಅನುಭವ ನೀಡಲಿದೆ.
ಟೂರ್ನಿಯ ಒಂದು ಝಲಕ್
ಐಪಿಎಲ್ 2025ನಲ್ಲಿ ಒಟ್ಟು 10 ತಂಡಗಳ ನಡುವೆ 74 ಪಂದ್ಯಗಳು ನಡೆಯಲಿವೆ. ಗ್ರೂಪ್ ಹಂತ ಹಾಗೂ ಪ್ಲೇಆಫ್ ಬಳಿಕ ಸೆಮಿ ಫೈನಲ್, ಫೈನಲ್ ಪಂದ್ಯ ನಡೆಯಲಿದೆ. ಆರಂಭಿಕ ಪಂದ್ಯ ಮಾರ್ಚ್ 22, 2025 ರಂದು ಕೆಕೆಆರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಈಡಿನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಫೈನಲ್ ಪಂದ್ಯವೂ ಮೇ 25, 2025 ರಂದು ಇದೇ ಮೈದಾನದಲ್ಲಿ ಭರ್ಜರಿ ಕೊನೆಗೊಳ್ಳಲಿದೆ. ಕೆಕೆಆರ್‌ಗೆ ಈ ಬಾರಿ ತವರಿನ ಮೈದಾನದಲ್ಲಿ ಆರಂಭ ಮತ್ತು ಅಂತ್ಯದ ಗೌರವ ದೊರೆತಿರುವುದು ಟೂರ್ನಮೆಂಟ್‌ಗೆ ಹೆಚ್ಚುವರಿ ಮೆರುಗು ನೀಡಿದೆ.
ರೆಕಾರ್ಡ್‌ಗಳ ಮೇಳವಾಗುತ್ತೆ ಈ ಬಾರಿಯ ಟೂರ್ನಿ!
ಈ ವರ್ಷದ ಐಪಿಎಲ್‌ಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೇವಲ ಹಣದ ಸದ್ದಲ್ಲ, ಇತಿಹಾಸ ಸೃಷ್ಟಿಸುವ ಕ್ಷಣಗಳಿಂದ ಕೂಡಿತ್ತು.
ರಿಶಬ್ ಪಂತ್ ಕಂಬ್ಯಾಕ್: ಅಪಘಾತ, ಗಾಯದ ನಂತರ ತಮ್ಮ ಆಟದ ಚಾಕಚಕ್ಯತೆಯನ್ನು ಮತ್ತೆ ಸಾಬೀತುಪಡಿಸಲು ಸಿದ್ಧರಾಗಿರುವ ರಿಶಬ್ ಪಂತ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ₹27 ಕೋಟಿಗೆ ಖರೀದಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ಒಂದು ದಾಖಲೆಯ ಬಿಡ್!
ಶ್ರೇಯಸ್ ಅಯ್ಯರ್‌ಗೆ ಭರ್ಜರಿ ಹಣ: ಪಂಜಾಬ್ ಕಿಂಗ್ಸ್ ಶ್ರೇಯಸ್ ಅಯ್ಯರ್ ಅವರನ್ನು ₹26.75 ಕೋಟಿಗೆ ಖರೀದಿಸಿದೆ. ತಂಡವನ್ನು ಮತ್ತಷ್ಟು ಆಕ್ರಮಣಕಾರಿಯನ್ನಾಗಿ ಮಾಡುವ ಯೋಜನೆ ಇದಾಗಿದೆ.
ವೈಭವ್ ಸೂರ್ಯವಂಶಿ ಎಂಬ ಬಾಲ ಪ್ರತಿಭೆ: ಕೇವಲ 13 ವರ್ಷದ ಬಾಲಕ ವೈಭವ್ ಸುರ್ಯವಂಶಿ ₹1.1 ಕೋಟಿಗೆ ರಾಜಸ್ಥಾನ ರಾಯಲ್ಸ್‌ಗೆ ಮಾರಾಟವಾಗಿ ಐಪಿಎಲ್‌ನ ಇತಿಹಾಸದ ಅತಿ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಸಾರದ ಹೊಸ ಯುಗ: ಜಿಯೋ ಸಿನೆಮಾ ಮತ್ತು ಡಿಸ್ನಿ+ ಹಾಟ್ ಸ್ಟಾರ್‌ನ ವಿಲೀನದ ನಂತರ ಪ್ರಸಾರ ಹಕ್ಕುಗಳು ಜಿಯೋ ಹಾಟ್ ಸ್ಟಾರ್‌ಗೆ ವರ್ಗಾಯಿಸಲ್ಪಟ್ಟಿದ್ದು, ಅಭಿಮಾನಿಗಳಿಗೆ ಉತ್ತಮ ಗುಣಮಟ್ಟದ ವೀಕ್ಷಣೆಯ ಅನುಭವ ಸಿಗೋದು ಖಾತರಿಯಾಗಿದೆ.
ಪ್ರಮುಖ ಬದಲಾವಣೆಗಳು: ಹೊಸ ನಿಯಮ, ಹೊಸ ರೀತಿ!
ಐಪಿಎಲ್ 2025 ಕೇವಲ ಆಟಗಾರರ ಬಿಡ್‌ಗಳಿಂದ ಮಾತ್ರವಲ್ಲ, ಆಡಳಿತದಲ್ಲಿ ಮತ್ತು ನಿಯಮಗಳಲ್ಲಿ ತಂದಿರುವ ಬದಲಾವಣೆಗಳಿಂದಲೂ ವಿಶೇಷವಾಗಿದೆ.
ಐಸಿಸಿ ಕೋಡ್ ಆಫ್ ಕಂಡಕ್ಟ್: ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅನ್ವಯವಾಗುವ ಐಸಿಸಿ ನೀತಿ ಸಂಹಿತೆಯನ್ನು ಐಪಿಎಲ್ ಕೂಡಾ ಅನುಸರಿಸಲಿದೆ. ಇದು ಪಾರದರ್ಶಕತೆ ಮತ್ತು ನ್ಯಾಯಬದ್ಧ ಆಟದ ಭರವಸೆ ನೀಡುತ್ತದೆ.
ಮ್ಯಾಚ್ ಫೀ ಸಂಭ್ರಮ: ಪ್ರತಿ ಪಂದ್ಯಕ್ಕೆ ಆಡುವ ಆಟಗಾರರಿಗೆ ₹7.5 ಲಕ್ಷ ಮ್ಯಾಚ್ ಫೀ ನೀಡಲಾಗುತ್ತದೆ. ಈ ಮೂಲಕ ಆಟಗಾರರಿಗೆ ಹೆಚ್ಚಿನ ಆರ್ಥಿಕ ಲಾಭ ಸಿಗಲಿದೆ.
ವೇತನ ಮಿತಿ ಏರಿಕೆ: ತಂಡಗಳ ವೇತನ ಮಿತಿ ₹146 ಕೋಟಿಗೆ ಹೆಚ್ಚಳಗೊಂಡಿದ್ದು, 2026 ಮತ್ತು 2027ರಲ್ಲಿ ಇನ್ನಷ್ಟು ಏರಿಕೆಯಾಗಲಿದೆ.
ಕಠಿಣ ನಿಯಮ: ಹರಾಜಿನಲ್ಲಿ ಭಾಗವಹಿಸಿ ಸೀಸನ್ ಆರಂಭದ ಮೊದಲೇ ಟೂರ್ನಿಯಿಂದ ದೂರ ಉಳಿಯುವ ಆಟಗಾರರು 2 ವರ್ಷಗಳ ನಿಷೇಧಕ್ಕೆ ಒಳಗಾಗುತ್ತಾರೆ. ಇದು ಆಟಗಾರರ ಜವಾಬ್ದಾರಿಯನ್ನು ಖಚಿತಪಡಿಸುತ್ತದೆ.
ಹರಾಜಿನ ಜಾಗತಿಕ ಆಯಾಮ: ಈ ಬಾರಿಯ ಹರಾಜು ಜೆದ್ದಾ, ಸೌದಿ ಅರೇಬಿಯಾದಲ್ಲಿ ನಡೆದಿದ್ದು, ಐಪಿಎಲ್‌ಗೆ ಅಂತಾರಾಷ್ಟ್ರೀಯ ಆಯಾಮ ಕೊಟ್ಟಿದೆ.
ಗ್ರೂಪ್ ವಿಭಾಗ: ಸ್ಪರ್ಧೆಯ ರೂಪರೇಷೆ
ತಂಡಗಳನ್ನು ಎರಡು ಗ್ರೂಪ್‌ಗಳಾಗಿ ವಿಂಗಡಿಸಲಾಗಿದೆ:
ಗ್ರೂಪ್ A: CSK, RCB, RR, PBKS, KKR
ಗ್ರೂಪ್ B: MI, GT, DC, SRH, LSG
ಪ್ರತಿ ತಂಡ ತನ್ನ ಗ್ರೂಪ್‌ನ ತಂಡಗಳ ವಿರುದ್ಧ ಎರಡು ಬಾರಿ ಮತ್ತು ಮತ್ತೊಂದು ಗ್ರೂಪ್‌ನ ತಂಡಗಳ ವಿರುದ್ಧ ಒಂದು ಬಾರಿ ಆಡಲಿದೆ. ಪ್ರತಿ ತಂಡವೂ ಮತ್ತೊಂದು ತಂಡವನ್ನು ಎರಡು ಬಾರಿ ಎದುರಿಸಲಿದೆ.
ಪ್ರಮುಖ ಆಟಗಾರರು ಮತ್ತು ತಂಡಗಳು
ರಿಶಬ್ ಪಂತ್: ಲಖನೌ ಸೂಪರ್ ಜೈಂಟ್ಸ್‌ಗೆ ₹27 ಕೋಟಿಯಲ್ಲಿ ಮಾರಾಟವಾಗಿ ಈ ಸೀಸನ್‌ಗೆ ಹೊಸ ಉತ್ಸಾಹ ತಂದಿದ್ದಾರೆ.
ವೈಭವ್ ಸೂರ್ಯವಂಶಿ: 13 ವರ್ಷದ ಈ ಯುವ ಪ್ರತಿಭೆ ರಾಜಸ್ಥಾನ ರಾಯಲ್ಸ್‌ನಲ್ಲಿ ತನ್ನ ಛಾಪು ಮೂಡಿಸಲು ಸಿದ್ಧವಾಗಿದ್ದಾರೆ.
ಹೊಸ ನಾಯಕತ್ವ: ರಜತ್ ಪಾಟಿದಾರ್ ಆರ್‌ಸಿಬಿ ತಂಡದ ನಾಯಕರಾಗಿ ತಂಡಕ್ಕೆ ಹೊಸ ದಿಕ್ಕು ನೀಡಲು ಮುಂದಾಗಿದ್ದಾರೆ.
ಐಪಿಎಲ್ 2025 ಕೇವಲ ಒಂದು ಕ್ರಿಕೆಟ್ ಟೂರ್ನಿ ಅಲ್ಲ, ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸವನ್ನು ಬರೆಯುವ ಸಂಭ್ರಮದ ಕ್ಷಣವಾಗಿದೆ. ಜೆದ್ದಾದಲ್ಲಿ ನಡೆದ ಹರಾಜು, ಹೊಸ ನಿಯಮಗಳು, ರೆಕಾರ್ಡ್ ಬಿಡ್‌ಗಳು ಮತ್ತು ಯುವ ಪ್ರತಿಭೆಗಳ ಆಗಮನ, ಈ ಲೀಗ್‌ಗೆ ಜಾಗತಿಕ ಮಾನ್ಯತೆಯನ್ನು ತಂದಿದೆ. ಅಭಿಮಾನಿಗಳು ಈ ಸೀಸನ್‌ನಲ್ಲಿ ರೋಮಾಂಚನಕಾರಿ ರೆಕಾರ್ಡ್‌ಗಳು ಮತ್ತು ತಂಡಗಳ ನಡುವಿನ ರೋಚಕ ಸ್ಪರ್ಧೆಗೆ ಸಾಕ್ಷಿಯಾಗಲಿದ್ದಾರೆ.