ಕೆ.ಎಲ್. ರಾಹುಲ್. ಕನ್ನಡಿಗ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಚಾಂಪಿಯನ್ ಆಗಿದೆ ಎಂದರೆ ತಂಡದ ಪ್ರತಿಯೊಬ್ಬರ ಕೊಡುಗೆಯೂ ಇದೆ. ಆದರೆ ಕೆಎಲ್ ರಾಹುಲ್ ಕೊಡುಗೆ ಇನ್ನಷ್ಟು ದೊಡ್ಡದು. ಏಕೆಂದರೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಪಂದ್ಯಕ್ಕೊಂದು ಫಿನಿಶಿಂಗ್ ಟಚ್ ಕೊಟ್ಟಿದ್ದೇ ಕೆಎಲ್ ರಾಹುಲ್.
ಕೆಎಲ್ ರಾಹುಲ್, ಚಾಂಪಿಯನ್ಸ್ ಟ್ರೋಫಿ ಶುರುವಾಗೋದಕ್ಕೂ ಮೊದಲು ಎದುರಿಸಿದ್ದ ಟೀಕೆಗಳಿವೆಯಲ್ಲ.. ಅವುಗಳು ಹಾರಿಬಲ್ ಆಗಿದ್ದವು. ಈ ಕೆಎಲ್ ರಾಹುಲ್, ತಂಡದಲ್ಲಿರಬೇಕಾ.. ಇವನನ್ಯಾಕೆ ಟೀಂನಲ್ಲಿಟ್ಕೋಬೇಕು.. ರಿಷಬ್ ಪಂತ್ ಇರೋವಾಗ.. ಕೆಎಲ್ ರಾಹುಲ್ʻಗೆ ಕೀಪರ್ ಪ್ಲೇಸ್ ಕೊಟ್ಟು ಟೀಂನಲ್ಲಿಟ್ಟುಕೊಳ್ಳಬೇಕಾ.. ಎಂದೆಲ್ಲ ಪ್ರಶ್ನೆಗಳೆದ್ದಿದ್ದವು. ಅಷ್ಟೇ ಅಲ್ಲ, ರಾಹುಲ್, ತಮ್ಮ ಬೆಸ್ಟ್ ಸ್ಥಾನ ಎನಿಸಿಕೊಂಡಿದ್ದ 5ನೇ ಕ್ರಮಾಂಕವನ್ನು, ಅಕ್ಷರ್ ಪಟೇಲ್ʻಗೆ ಬಿಟ್ಟು ಕೊಟ್ಟಿದ್ದರು. 5ನೇ ಕ್ರಮಾಂಕದಲ್ಲಿ ಅದ್ಭುತ ಸರಸಾರಿ ಹೊಂದಿದ್ದರೂ, ರಾಹುಲ್ʻಗೆ 6ನೇ ಕ್ರಮಾಂಕ ಕೊಡಲಾಗಿತ್ತು. ಫಿನಿಷರ್ ಜವಾಬ್ದಾರಿ ನೀಡಲಾಗಿತ್ತು.
ಇಂಥದ್ದರ ಬಗ್ಗೆ ಎಲ್ಲ ಮಾತನಾಡಿದ್ದ ಕೆಎಲ್ ರಾಹುಲ್, ಟೀಂ ನನ್ನನ್ನು ಯಾವ ರೀತಿ ಆಡು ಎನ್ನುತ್ತದೆಯೋ.. ಆ ರೀತಿ ಆಡ್ತೇನೆ. ತಂಡ ಬಯಸಿದಂತೆ ಆಡಿದ್ದೇನೆ. ನಾನೂ ಗೆದ್ದಿದ್ದೇನೆ. ತಂಡವನ್ನೂ ಗೆಲ್ಲಿಸಿದ್ದೇನೆ. ಆದರೆ ಒಂದು ಟೂರ್ನಿ ಮುಗಿದು ಇನ್ನೊಂದು ಟೂರ್ನಿ ಶುರುವಾಗುವಾಗ ಕೆಎಲ್ ರಾಹುಲ್, ಟೀಂ ನಲ್ಲಿರ್ತಾನಾ.. ಇಲ್ವಾ ಅನ್ನೋ ಚರ್ಚೆ ಶುರುವಾಗುತ್ತದೆ. ನಾನಂತೂ ಬೇಸತ್ತು ಹೋಗಿದ್ದೇನೆ ಎಂದು ಹೇಳಿದ್ದರು.
ಇನ್ನು ಹರ್ಷ ಭೋಗ್ಲೆ ಅವರಂತೂ ನಿಮ್ಮ ಹೆಸರು ರಾಹುಲ್ ಆಗಿದ್ದರೆ, ಕರ್ನಾಟಕದವರಾಗಿದ್ದು, ಬೆಂಗಳೂರಿಗರಾಗಿದ್ದರೆ, ನೀವು ತಂಡದಲ್ಲಿ ಯಾವ ಸ್ಥಾನ ಬೇಕಾದರೂ ನಿಭಾಯಿಸ್ತೀರಿ ಎಂದು ಹೇಳಿದ್ದರು. ಆ ಮಾತಿನಲ್ಲಿ ಕೆಎಲ್ ರಾಹುಲ್ ಅವರನ್ನು, ದಿಗ್ಗಜ ರಾಹುಲ್ ದ್ರಾವಿಡ್ ಅವರಿಗೆ ಹೋಲಿಸಿದ್ದರು.
ಕೆಎಲ್ ರಾಹುಲ್, ರಾಹುಲ್ ದ್ರಾವಿಡ್ ಅವರ ಸಾಧನೆಗೆ ಸರಿಸಮವಾ.. ಹಾಗೇನಿಲ್ಲ. ಆದರೆ ಆ ದಿಗ್ಗಜನ ಜೊತೆಗೆ ಹೋಲಿಕೆ ಮಾಡೋದೇ ಒಂದು ಗ್ರೇಟ್ ವಿಷಯ. ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಎಲ್ ರಾಹುಲ್, ವಿಕೆಟ್ ಹಿಂದೆ ಅದ್ಭುತವಾಗಿ ಕೀಪಿಂಗ್ ಮಾಡಿದ್ಧಾರೆ. ತಂಡಕ್ಕೆ ಅಗತ್ಯ ಇದ್ದಾಗ ಬ್ಯಾಟಿಂಗ್ ಮಾಡಿದ್ದಾರೆ. ಅದ್ಭುತವಾಗಿ ಫಿನಿಷ್ ಮಾಡಿ, ತಂಡವನ್ನ ಗೆಲ್ಲಿಸಿದ್ದಾರೆ. ಟೀಕೆಗಳಿಗೆಲ್ಲ ಉತ್ತರ ಕೊಟ್ಟಿರೋದು ಬ್ಯಾಟಿನಲ್ಲೇ.
2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗಿನಿಂದಾಗಿ, ಅದಕ್ಕೂ ಹಿಂದಿನ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮೇಡನ್ ಕೊಟ್ಟಿದ್ದರಿಂದ 2024ರ ಟಿ-20 ವಿಶ್ವಕಪ್ ಟೂರ್ನಿ ಟೀಂನಿಂದ ರಾಹುಲ್ ಅವರನ್ನ ಡ್ರಾಪ್ ಮಾಡಲಾಗಿತ್ತು. ಅದರ ಜೊತೆಗೆ ಐಪಿಎಲ್‌ನಲ್ಲಿ ತಂಡದ ಮಾಲೀಕ, ಬಹಿರಂಗವಾಗಿ ಅವಮಾನ ಮಾಡಿದ್ದ. ಇದೆಲ್ಲದರ ಮಧ್ಯೆ ಕೆಎಲ್ ರಾಹುಲ್ ನಂಬಿಕೆ ಇಟ್ಟಿದ್ದು ಕ್ಯಾಪ್ಟನ್ ರೋಹಿತ್ ಶರ್ಮಾ.
ನಾಯಕನ ನಂಬಿಕೆಯನ್ನು ರಾಹುಲ್ ಉಳಿಸಿಕೊಂಡಿದ್ದಾರೆ. ಲೀಗ್ ಪಂದ್ಯಗಳಲ್ಲಿ ಬಾಂಗ್ಲಾ ವಿರುದ್ಧ 41 ರನ್, ನ್ಯೂಜಿಲೆಂಡ್ ವಿರುದ್ಧ 23 ರನ್ ಗಳಿಸಿದ್ದ ರಾಹುಲ್, ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 42 ರನ್, ಫೈನಲ್ ಪಂದ್ಯದಲ್ಲಿ 34 ರನ್ ಗಳಿಸಿ ತಂಡವನ್ನ ಗೆಲ್ಲಿಸಿದ್ರು.
ಕ್ಯಾಪ್ಟನ್ ರೋಹಿತ್ ಶರ್ಮಾ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಆ ನಂಬಿಕೆಗೆ, ಅವರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಅಷ್ಟೇ ಎಂದಿದ್ದಾರ ಕೆಎಲ್ ರಾಹುಲ್. ಇದೇನ್ ರೀ.. ಇಡೀ ಟೂರ್ನಮೆಂಟಿನಲ್ಲಿ ಒಂದೇ ಒಂದು ಹಾಫ್ ಸೆಂಚುರಿನೂ ಇಲ್ಲ ಅನ್ಬೇಡಿ. 6ನೇ ಕ್ರಮಾಂಕವೇ ಹಾಗೆ.. ಪರ್ಸನಲ್ ದಾಖಲೆಗಳನ್ನೆಲ್ಲ ಸೈಡಿಗಿಟ್ಟು, ಕೇವಲ ತಂಡಕ್ಕೆ ಆಡುವವರಿಗೆ ಮಾತ್ರವೇ ಆ ಕ್ರಮಾಂಕ ಸಿಗುತ್ತೆ. ರೋಹಿತ್ ಶರ್ಮಾ ಆರಂಭದ ದಿನಗಳಲ್ಲಿ ಆಡುತ್ತಾ ಇದ್ದದ್ದು ಅದೇ 6ನೇ ಕ್ರಮಾಂಕದಲ್ಲಿ. ಧೋನಿ ಕೂಡಾ ಆಡ್ತಾ ಇದ್ದದ್ದು ಅದೇ 6ನೇ ಕ್ರಮಾಂಕದಲ್ಲಿ.