ಫಾರ್ಮುಲಾ ಒನ್. ಮೋಟಾರ್ ಸ್ಪೋರ್ಟ್ಸ್ ರೇಸಿಂಗ್‌ನಲ್ಲಿಯೇ ಉನ್ನತ ಶಿಖರವಿದ್ದಂತೆ. 10 ತಂಡಗಳು.. 20 ಡ್ರೈವರ್‌ಗಳು ಮಾತ್ರ ಸ್ಪರ್ಧಿಸುವ ಜಗತ್ತಿನ ಅತ್ಯಂತ ಪ್ರಖಾತ್ಯವಾದ ರೇಸ್. ಎಫ್1ನಲ್ಲಿ ಮಾಡುವ ಅನ್ವೇಷಣೆಗಳು ರಸ್ತೆಯಲ್ಲಿ ಸಂಚರಿಸುವ ಕಾರುಗಳಲ್ಲಿ ಅಳವಡಿಸಿಕೊಳ್ಳುವ ಅನೇಕ ಸುರಕ್ಷತಾ ಮಾನದಂಡಗಳಿಗೆ ಕಾರಣವಾಗಿದೆ. ಹೀಗಾಗಿಯೇ ಮೋಟಾರ್ ಸ್ಪೋರ್ಟ್ಸ್ ಬಗ್ಗೆ ಒಲವಿರುವ ಎಲ್ಲರೂ ಎಫ್1 ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಅದರಲ್ಲಿಯೂ ಎಫ್1 ಎಂಜಿನ್, ಏರೋ ಡೈನಾಮಿಕ್ಸ್‌ನಲ್ಲಿ ಆಗೋ ಸಣ್ಣ ಬದಲಾವಣೆಯೂ ರಸ್ತೆಯಲ್ಲಿ ಸಂಚರಿಸುವ ಕಾರುಗಳ ಸ್ವರೂಪದಲ್ಲಿ ಭಾರಿ ಬದಲಾವಣೆಗೆ ಕಾರಣವಾಗುತ್ತವೆ. ಇಂತಾ ಎಫ್1ನಲ್ಲಿ ಭಾರತೀಯನೊಬ್ಬ, ಅದರಲ್ಲಿಯೂ ನಮ್ಮ ಕನ್ನಡಿಗ, ಬೆಂಗಳೂರಿನ ಹುಡುಗ ಎಂಟ್ರಿ ಕೊಟ್ಟಿದ್ದಾನೆ.
ಮೋಟಾರ್ ಸ್ಪೋರ್ಟಿಂಗ್ ಬಗ್ಗೆ ಗೊತ್ತಿರುವ ಯಾರೇ ಆದರೂ, ಫಾರ್ಮುಲಾ ಒನ್ ಶಬ್ದ ಕೇಳಿದಾಕ್ಷಣ ಕಣ್ಣಗಲಿಸಿ.. ಕಿವಿಯಗಲಿಸಿ ಆ ಶಬ್ದ ಬಂದ ಕಡೆ ನೋಡುತ್ತಾರೆ. ಅದು ಫಾರ್ಮುಲಾ ಒನ್‌ಗಿರುವ ತಾಕತ್ತು. ಜಗತ್ತಿನಲ್ಲಿ Rally ಚಾಂಪಿಯನ್‌ಶಿಪ್, ಇಂಡಿಕಾರ್, ಮೋಟೋ ಜಿಪಿ, ಫಾರ್ಮುಲಾ ಫೋರ್, ತ್ರೀ, ಟೂ ಹೀಗೆ ಎಷ್ಟೋ ರೇಸಿಂಗ್ ಚಾಂಪಿಯನ್‌ಶಿಪ್‌ಗಳಿವೆ. ಇವುಗಳಲ್ಲೆವೂ ಒಂದು ತೂಕವಾದರೆ, ಫಾರ್ಮುಲಾ ಒನ್ ತೂಕವೇ ಮತ್ತೊಂದು. ಇಂತಹ ಫಾರ್ಮುಲಾ ಒನ್‌ನಲ್ಲಿ ಜಸ್ಟ್ ತಂಡದ ಗ್ಯಾರೇಜ್‌ನ ಭಾಗವಾದರೆ ಸಾಕು ಎಂದು ಕನಸು ಕಾಣೋರಿಗೆ ಲೆಕ್ಕವೇ ಇಲ್ಲ. ಹೀಗಿದ್ದಾಗ ತಂಡದಲ್ಲಿ ಡ್ರೈವರ್ ಆದರೆ ಹೇಗಿರಬೇಡ..?
ಆಲ್ಬರ್ಟೋ ಅಸ್ಕಾರಿಯಿಂದ ಹಿಡಿದು.. ಜಿಮ್ ಕ್ಲಾರ್ಕ್, ನಿಕ್ಕಿ ಲೂಡಾ, ಯುವಾನ್ ಮ್ಯಾನ್ಯುಯಲ್ ಫಾಂಜಿಯೋ, ಅಲೈನ್ ಪ್ರಾಸ್ಟ್, ಅಯೋರ್ಟನ್ ಸೆನ್ನಾ, ಮೈಕಲ್ ಶೂಮೇಕರ್, ಫರ್ನಾಂಡೋ ಅಲಾನ್ಸೋ, ಸೆಬಾಸ್ಟಿಯನ್ ವೆಟ್ಟಲ್, ಲೂಯಿಸ್ ಹ್ಯಾಮಿಲ್ಟನ್, ಮ್ಯಾಕ್ಸ್ ವೆರ್‌ಸ್ಟೆಪನ್‌ವರೆಗೆ ಹಲವಾರು ಚಾಂಪಿಯನ್‌ಗಳನ್ನು ಫಾರ್ಮುಲಾ ಒನ್ ತಯಾರು ಮಾಡಿದೆ. ಹೀಗೆಂದು ಒಬ್ಬೇ ಒಬ್ಬ ಭಾರತೀಯನೂ ಫಾರ್ಮುಲಾ ಒನ್‌ಗೆ ಎಂಟ್ರಿ ಕೊಟ್ಟಿರಲಿಲ್ಲ ಎಂದೇನು ಇಲ್ಲ. ನರೇನ್ ಕಾರ್ತಿಕೇಯನ್ ಮೊಟ್ಟ ಮೊದಲ ಭಾರತೀಯ ಫಾರ್ಮುಲಾ ಒನ್ ಡ್ರೈವರ್ ಆಗಿ ಇತಿಹಾಸ ಬರೆದಿದ್ದರು. ಇದಾದ ಬಳಿಕ ಕರುಣ್ ಚಾಂದೋಕ್ ಫಾರ್ಮುಲಾ ಒನ್ ಡ್ರೈವರ್ ಆಗಿದ್ದರು. ಆದರೆ, 2012ರಲ್ಲಿ ಕರುಣ್ ಚಾಂದೋಕ್ ನಿವೃತ್ತರಾದ ಬಳಿಕ ಯಾವೊಬ್ಬ ಭಾರತೀಯನೂ ಕೂಡ ಫಾರ್ಮುಲಾ ಒನ್‌ಗೆ ಎಂಟ್ರಿ ಕೊಟ್ಟಿರಲಿಲ್ಲ.
ವಿಜಯ್ ಮಲ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಮೊದಲು ತಮ್ಮದೇ ಆದ ಫಾರ್ಮುಲಾ ಒನ್ ತಂಡವನ್ನು ಹೊಂದಿದ್ದರು. ಫೋರ್ಸ್ ಇಂಡಿಯಾ ಎಫ್ ಒನ್ ಎಂಬುದು ಅದರ ಹೆಸರು. ಏಡ್ರಿಯನ್ ಸುಟಿಲ್, ಸರ್ಜಿಯೋ ಪೆರೆಜ್ ಸೇರಿ ಹಲವರು ಈ ತಂಡದಲ್ಲಿ ಡ್ರೈವರ್‌ಗಳಾಗಿದ್ದರು. ಭಾರತೀಯರು ಸಹ ಫಾರ್ಮುಲಾ ಒನ್‌ನಲ್ಲಿ ಭಾಗವಹಿಸಬೇಕು ಎಂದು ಸಹಾರಾ ಗ್ರೂಪ್ ಜೊತೆಗೂಡಿ ವಿಜಯ್ ಮಲ್ಯ ಕನಸು ಕಂಡಿದ್ದರು. ಹೀಗಾಗಿಯೇ ‘ಒನ್ ಇನ್ ಎ ಬಿಲಿಯನ್’ ಎಂಬ ಕಾರ್ಯಕ್ರಮದಡಿ ಮುಂಬೈನ ಜೇಹಾನ್ ದಾರೂವಾಲಾರನ್ನು ಬೆಳಕಿಗೆ ತಂದಿದ್ದರು. ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಫಾರ್ಮುಲಾ ಒನ್ ಡ್ರೈವರ್ ಮಾಡೋ ಉದ್ದೇಶ ಹೊಂದಿದ್ದರು. ಆದರೆ, ಕಿಂಗ್‌ಫಿಷರ್ ಏರ್‌ಲೈನ್ಸ್ ಉಳಿಸಲು ತೆಗೆದುಕೊಂಡಿದ್ದ ಬ್ಯಾಂಕ್ ಸಾಲವನ್ನು ಕಟ್ಟಲಾಗದೇ, ವಿಜಯ್ ಮಲ್ಯ ದೇಶಭ್ರಷ್ಟರಾದ ಬಳಿಕ ಈ ಕನಸು ಕನಸಾಗಿಯೇ ಉಳಿದು ಹೋಗಿತ್ತು. ಜೇಹಾನ್ ದಾರೂವಾಲಾ ಫಾರ್ಮುಲಾ ತ್ರೀ, ಫಾರ್ಮುಲಾ ಟೂನಲ್ಲಿ ಭಾಗವಹಿಸಿದ್ದರು. ಅಲ್ಲಿ ಕೆಲವು ಬಾರಿ ಪೋಡಿಯಂ ಕೂಡ ಹತ್ತಿದ್ದರು. ಆದರೆ, ಸ್ಪಾನ್ಸರ್‌ಗಳ ಕೊರತೆಯಿಂದ ಫಾರ್ಮುಲಾ ಒನ್‌ಗೆ ಎಂಟ್ರಿ ಕೊಡಲು ಸಾಧ್ಯವಾಗಿರಲಿಲ್ಲ.
ಜೇಹಾನ್ ದಾರೂವಾಲಾಗೆ ಸ್ಪಾನ್ಸರ್‌ಗಳ ಕೊರತೆ ಎದುರಾದ ಬಳಿಕ, ಭಾರತದ ಮೋಟಾರ್ ಸ್ಪೋರ್ಟಿಂಗ್ ಅಭಿಮಾನಿಗಳು ಮುಂದೆಂದೂ ಭಾರತದ ತ್ರಿವರ್ಣ ಧ್ವಜ, ಫಾರ್ಮುಲಾ ಒನ್ ಅಂಗಳದಲ್ಲಿ ಕಾಣಿಸಿಕೊಳ್ಳಲ್ಲ ಬಿಡು ಎಂದು ನಿರಾಸೆ ಅನುಭವಿಸಿದ್ದರು. ಆದರೆ, ಆ ನಿರಾಸೆಯನ್ನ ಮರೆಸುವಂತೆ ನಮ್ಮ ಹೆಮ್ಮೆಯ ಕನ್ನಡಿಗನೊಬ್ಬ ಫಾರ್ಮುಲಾ ಒನ್‌ಗೆ ಎಂಟ್ರಿ ಕೊಟ್ಟಿದ್ದಾನೆ. ಆತನೇ ಈಗಾಗಲೇ ಫಾರ್ಮುಲಾ ಟೂನಲ್ಲಿ ಧೂಳೆಬ್ಬಿಸಿರುವ ನಮ್ಮ ಬೆಂಗಳೂರಿನ ಮಗ ಕುಶ್ ಮೈನಿ. ಈತ ಆಲ್ಪೀನ್ ಬಿಡಬ್ಲ್ಯೂಟಿ ಫಾರ್ಮುಲಾ ಒನ್ ತಂಡದ ಪರೀಕ್ಷಾ ಮತ್ತು ರಿಸರ್ವ್ ಡ್ರೈವರ್ ಆಗಿ ನೇಮಕಗೊಂಡಿದ್ದಾನೆ. ಟೆಸ್ಟ್ ಡ್ರೈವರ್ ಆಗಿ ನೇಮಕವಾದ ಬಳಿಕ ಭಾರತೀಯ ಮೋಟಾರ್ ಸ್ಪೋರ್ಟಿಂಗ್ ಪ್ರೇಮಿಗಳು ಖುಷಿಯಾಗಿದ್ದಾರೆ. ಏಕೆಂದರೆ, ಕುಶ್ ಮೈನಿ ಈ ಬಾರಿಯ ಫಾರ್ಮುಲಾ ಒನ್ ಸೀಸನ್‌ನಲ್ಲಿ ಪ್ರೀ ಪ್ರಾಕ್ಟಿಸ್ ಸೆಷನ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ಇಷ್ಟಕ್ಕೂ ಯಾರು ಈ ಕುಶ್ ಮೈನಿ ಅಂತಾ ಹುಡುಕುತ್ತಾ ಹೋದರೆ ಅಚ್ಚರಿಯ ವಿಚಾರ ಬೆಳಕಿಗೆ ಬರುತ್ತದೆ. ಈತ ಬೇರಾರು ಅಲ್ಲ, ಭಾರತದ ಮೊದಲ ಎಲೆಕ್ಟ್ರಿಕ್ ಕಾರು ಕಂಪನಿ ರೇವಾ ಎಲೆಕ್ಟ್ರಿಕ್ ಕಂಪನಿ ಸಹ-ಸಂಸ್ಥಾಪಕರ ಕುಟುಂಬದ ಕುಡಿ. ರೇವಾ ಎಲೆಕ್ಟ್ರಿಕ್ ಸಹ ಸಂಸ್ಥಾಪಕ ಚೇತನ್ ಮೈನಿಗೆ ಹತ್ತಿರದ ಸಂಬಂಧಿ. ಚೇತನ್ ಮೈನಿ ಕೂಡ ಅಮೆರಿಕದಲ್ಲಿ ಸೋಲಾರ್ ಕಾರು ರೇಸಿಂಗ್ ತಂಡದ ಭಾಗವಾಗಿದ್ದರು. ಹೀಗಾಗಿಯೇ ಇವರ ರಕ್ತದಲ್ಲಿಯೇ ರೇಸಿಂಗ್ ಮುಂದುವರಿದುಕೊಂಡು ಬಂದಂತೆ ಕಾಣುತ್ತಿದೆ. ಇವರ ಸಹೋದರ ಅರ್ಜುನ್ ಮೈನಿ ಕೂಡ ರೇಸಿಂಗ್ ಡ್ರೈವರ್ ಆಗಿದ್ದಾರೆ. ಫಾರ್ಮುಲಾ ಒನ್‌ನ 10 ತಂಡಗಳಲ್ಲಿ ಒಂದಾದ ಹಾಸ್ ಎಫ್1 ತಂಡದ ಡೆವಲಪ್ಮೆಂಟ್ ಡ್ರೈವರ್ ಆಗಿದ್ದಾರೆ. ಆದರೆ, ಅರ್ಜುನ್ ಮೈನಿ ನೇರವಾಗಿ ಎಫ್1ನ ಭಾಗವಾಗಿಲ್ಲ. ಬದಲಿಗೆ ಜರ್ಮನಿಯಲ್ಲಿ ಫೇಮಸ್ ಆಗಿರುವ ಡಿಟಿಎಂ ಸಿರೀಸ್‌ನಲ್ಲಿ ಮರ್ಸಿಡಿಸ್ ಎಎಂಜಿ ತಂಡದ ಡ್ರೈವರ್ ಆಗಿದ್ದಾರೆ.
ಕುಶ್ ಮೈನಿ ಹುಟ್ಟಿದ್ದು 2000ನೇ ವರ್ಷದ ಸೆಪ್ಟೆಂಬರ್ 22ರಂದು. ಚಿಕ್ಕ ವಯಸ್ಸಿನಲ್ಲಿಯೇ ಎಲ್ಲ ರೇಸಿಂಗ್ ಡ್ರೈವರ್‌ಗಳಂತೆಯೇ ಇವರೂ ಸಹ ಗೋಕಾರ್ಟಿಂಗ್ ಗೀಳು ಹತ್ತಿಸಿಕೊಂಡಿದ್ದರು. ಇವರ ಕೌಶಲ್ಯವನ್ನ ನೋಡಿ ಕುಟುಂಬಸ್ಥರು ಉತ್ತಮ ಬೆಂಬಲ ನೀಡಿದರು. ಫಾರ್ಮುಲಾ ಒನ್ ರೇಸರ್ ಆಗಬೇಕು ಎಂದರೆ ಅವರಿಗೆ ಯುರೋಪಿಯನ್ ಕನೆಕ್ಷನ್ ಇರಲೇಬೇಕು. ಯುರೋಪಿಯನ್ ರೇಸಿಂಗ್ ಸರ್ಕ್ಯೂಟ್ ಗೊತ್ತಿಲ್ಲ ಎಂದರೆ, ಫಾರ್ಮುಲಾ ಒನ್‌ಗೆ ಎಂಟ್ರಿ ಕೊಡುವುದು ಭಾರಿ ಕಷ್ಟ. ಹೀಗಾಗಿಯೇ ಫಾರ್ಮುಲಾ ಒನ್‌ನ ಬಹುತೇಕ ರೇಸರ್‌ಗಳು ಯುರೋಪಿಯನ್ ಮೂಲದವರಾಗಿರುತ್ತಾರೆ. ಇದೇ ಕಾರಣಕ್ಕೆ ಕುಶ್ ಮೈನಿ ತಮ್ಮ 16ನೇ ವಯಸ್ಸಿನಲ್ಲಿ ಇಟಾಲಿಯನ್ ಫಾರ್ಮುಲಾ ಫೋರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆರಂಭಿಸಿದ್ದರು. ಬಿವಿಎಂ ತಂಡ ಸೇರಿದ್ದ ಕುಶ್ ಮೈನಿ, ಆರಂಭಿಕ 6 ರೇಸ್‌ಗಳಲ್ಲಿಯೂ ಅಂಕ ಗಳಿಸಿದ್ದರು. ಸೀಸನ್ ಮಧ್ಯ ಭಾಗದಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.
2017ರಲ್ಲಿ ಇಟಾಲಿಯನ್ ಫಾರ್ಮುಲಾ ಫೋರ್‌ನ ಮತ್ತೊಂದು ತಂಡವಾದ ಜೆನ್‌ಜೆರ್ ತಂಡ ಸೇರಿ, ಉತ್ತಮ ಪ್ರದರ್ಶನ ತೋರಿದರು. ಅದರಲ್ಲಿಯೂ ಮೋಟಾರ್ ಸ್ಪೋರ್ಟ್ಸ್‌ನ ಥಿಯೇಟರ್ ಆಫ್ ಡ್ರೀಮ್ಸ್ ಎಂದು ಕರೆಸಿಕೊಳ್ಳುವ ಇಮೋಲಾ ಮತ್ತು ಮೋಂಜಾದಲ್ಲಿ ಪೋಡಿಯಂ ಹತ್ತಿದ್ದರು. ಹೀಗಾಗಿ 2017ರ ಡ್ರೈವರ್ಸ್ ಚಾಂಪಿಯನ್‌ಶಿಪ್‌ನಲ್ಲಿ 8ನೇ ಸ್ಥಾನ ಪಡೆದು ಮಿಂಚಿದ್ದರು. ಸೆಕೆಂಡ್ ಸೀಸನ್‌ನಲ್ಲಿಯೇ ಇಂತಾ ಸಾಧನೆ ಮಾಡುವುದು ಸಾಮಾನ್ಯದ ಮಾತಲ್ಲ. 2018ರಿಂದ 2021ರವರೆಗೆ ಬ್ರಿಟೀಷ್ ಫಾರ್ಮುಲಾ ತ್ರೀ, ಫಾರ್ಮುಲಾ ರೆನೋ ಯೂರೋಕಪ್, ಫಾರ್ಮುಲಾ ತ್ರೀ ಏಷಿಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿದ್ದರು. ಫಾರ್ಮುಲಾ ತ್ರೀಗೆ ಸಿಕ್ಕ ಅದೊಂದು ಚಾನ್ಸ್‌ನಿಂದ ಅವರ ವೃತ್ತಿ ಜೀವನಕ್ಕೆ ತಿರುವು ಸಿಕ್ಕಿತ್ತು. 2022ರಲ್ಲಿ ಮೊದಲ ಬಾರಿಗೆ ಎಫ್ಐಎ ಫಾರ್ಮುಲಾ ತ್ರೀನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಎಂಪಿ ಮೋಟಾರ್ ರ್ಸ್ಪೋರ್ಟ್ಸ್ ತಂಡದ ಮೂವರು ಡ್ರೈವರ್‌ಗಳಲ್ಲಿ ಒಬ್ಬರಾಗಿದ್ದರು. ಆ ಸೀಸನ್‌ನಲ್ಲಿ 31 ಅಂಕಗಳನ್ನ ಗಳಿಸಿ, ಡ್ರೈವರ್ಸ್ ಚಾಂಪಿಯನ್‌ಶಿಪ್‌ನಲ್ಲಿ 14ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.
2023ರಲ್ಲಿ ಫಾರ್ಮುಲಾ ತ್ರೀನಿಂದ ಫಾರ್ಮುಲಾ ಟುಗೆ ಬಡ್ತಿ ಪಡೆದಿದ್ದರು. ಕ್ಯಾಂಪೋಸ್ ರೇಸಿಂಗ್ ತಂಡದ ಭಾಗವಾಗಿದ್ದ ಕುಶ್ ಮೈನಿ ಆ ವರ್ಷ ಡ್ರೈವರ್ಸ್ ಚಾಂಪಿಯನ್‌ಶಿಪ್‌ನಲ್ಲಿ 11ನೇ ಸ್ಥಾನ ಗಳಿಸಿದ್ದರು. 62 ಅಂಕಗಳನ್ನು ಕಲೆ ಹಾಕು ಮೂಲಕ ಫಾರ್ಮುಲಾ ಟುನಲ್ಲಿ ಈಗಾಗಲೇ ಹೆಸರು ಮಾಡಿದ್ದ ತಮ್ಮದೇ ದೇಶದ ಜೇಹಾನ್ ದಾರೂವಾಲಾಗಿಂತಾ ಹೆಚ್ಚಿನ ಅಂಕಗಳನ್ನು ಪಡೆದಿದ್ದರು. 2024ರಲ್ಲಿ ಇನ್ವಿಕ್ಟಾ ರೇಸಿಂಗ್ ತಂಡ ಫಾರ್ಮುಲಾ ಟು ಚಾಂಪಿಯನ್ ಆಗಲು ಕುಶ್ ಮೈನಿ ಗಣನೀಯ ಪಾತ್ರ ವಹಿಸಿದ್ದರು. 2025ರ ಸೀಸನ್‌ನಲ್ಲಿ ಡ್ಯಾಮ್ಸ್ ಲುಕಾಸ್ ಆಯಿಲ್ ತಂಡ ಸೇರಿದ್ದಾರೆ. ಜೊತೆಗೆ ಆಲ್ಪೀನ್ ಫಾರ್ಮುಲಾ ಒನ್ ಟೀಂನ ಟೆಸ್ಟ್ ಮತ್ತು ರಿಸರ್ವ್ ಡ್ರೈವರ್ ಆಗಿ ಫಾರ್ಮುಲಾ ಒನ್‌ಗೆ ಎಂಟ್ರಿ ಕೊಟ್ಟಿದ್ದಾರೆ.