ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)ನಲ್ಲಿ 43 ವರ್ಷದ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ ಕೀಪಿಂಗ್ ಮ್ಯಾಜಿಕ್ ಮುಂದುವರೆದಿದೆ. ಕಳೆದ ಕೆಲ ಪಂದ್ಯಗಳಲ್ಲಿ ಅತ್ಯದ್ಭುತ ಸ್ಟಂಪಿಂಗ್ನೊಂದಿಗೆ ಗಮನ ಸೆಳೆದಿದ್ದ ಧೋನಿ, ಈ ಬಾರಿಯೂ ಅತ್ಯುತ್ತಮ ರನೌಟ್ನೊಂದಿಗೆ ಸಂಚಲನ ಸೃಷ್ಟಿಸಿದ್ದಾರೆ.
ನೆನ್ನೆ ಲಕ್ನೋ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪರ ಕೊನೆಯ ಓವರ್ನಲ್ಲಿ ಅಬ್ದುಲ್ ಸಮದ್ ಬ್ಯಾಟಿಂಗ್ ಮಾಡುತ್ತಿದ್ದರು. ಇತ್ತ ಸಿಎಸ್ಕೆ ಪರ ಮತೀಶ ಪತಿರಾಣ ಬೌಲಿಂಗ್ ಮಾಡುತ್ತಿದ್ದರು. 20ನೇ ಓವರ್ನ 2ನೇ ಎಸೆತವನ್ನು ಪತಿರಾಣ ವೈಡ್ ಎಸೆದಿದ್ದಾರೆ.
ಚೆಂಡು ದೂರ ಸಾಗಿ ವಿಕೆಟ್ ಕೀಪರ್ ಕೈ ಸೇರುವಷ್ಟರಲ್ಲಿ ಒಂದು ರನ್ ಕಲೆಹಾಕಲು ನಾನ್ ಸ್ಟ್ರೈಕ್ನಿಂದ ರಿಷಭ್ ಪಂತ್ ಓಡಿದ್ದಾರೆ. ಅತ್ತ ಕಡೆಯಿಂದ ಅಬ್ದುಲ್ ಸಮದ್ ನಾನ್ ನಾನ್ ಸ್ಟ್ರೈಕ್ನತ್ತ ಓಡಿ ಬರುವಷ್ಟರಲ್ಲಿ ಧೋನಿ ಅಂಡರ್ ಆರ್ಮ್ ಥ್ರೋ ಎಸೆದರು. ಚೆಂಡು ಗಾಳಿಯಲ್ಲಿ ತೇಲುತ್ತಾ ಬಂದು ನೇರವಾಗಿ ವಿಕೆಟ್ಗೆ ಬಡಿದಿದೆ.
ಈ ಅದ್ಭುತ ಅಂಡರ್ ಆರ್ಮ್ ಥ್ರೋ ರನೌಟ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಧೋನಿಯ ಕೀಪಿಂಗ್ ಚಮತ್ಕಾರಕ್ಕೆ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು 166 ರನ್ಗಳು ಮಾತ್ರ. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 19.3 ಓವರ್ಗಳಲ್ಲಿ 168 ರನ್ ಬಾರಿಸಿ 5 ವಿಕೆಟ್ಗಳ ಜಯ ಸಾಧಿಸಿದೆ.
ಹೊಸ ದಾಖಲೆ ಬರೆದ ಧೋನಿ
ಹೌದು ಮಹೇಂದ್ರ ಸಿಂಗ್ ಧೋನಿ ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡುವಾಗಲೇ 200 ವಿಕೆಟ್ ಪಡೆದ ವಿಕೆಟ್ ಕೀಪರ್ ಎಂಬ ಹೊಸ ದಾಖಲೆ ಬರೆದಿದ್ದಾರೆ. ಧೋನಿ ವಿಕೆಟ್ ಕೀಪರ್ ಆಗಿ ಈ ಪಂದ್ಯದಲ್ಲಿ ಎರಡು ಕ್ಯಾಚ್ ಹಾಗೂ ಒಂದು ಸ್ಟಂಪಿಂಗ್ ಮಾಡಿ ಗಮನಸೆಳೆದರು.