ಪ್ರಶಾಂತ್ ಎಸ್ , ಸ್ಪೇಷಲ್ ಡೆಸ್ಕ್, ಗ್ಯಾರಂಟಿ ನ್ಯೂಸ್
ಇಂಡಿಯನ್ ಪ್ರೀಮಿಯರ್ ಹಬ್ಬಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 22ರಿಂದ ಭರ್ತಿ ಎರಡು ತಿಂಗಳು ಐಪಿಎಲ್ ಮಿನಿ ಸಂಗ್ರಾಮ ನಡೆಯಲಿದೆ. ಕ್ರಿಕೆಟ್ ಪ್ರೇಮಿಗಳು ಎಲ್ಲಾ ಮರೆತು ಸಿಕ್ಸ್-ಬೌಂಡರಿ, ವಿಕೆಟ್ ಬೇಟೆ, ರನ್, ರನ್ ಔಟ್, ಸೂಪರ್ ಕ್ಯಾಚ್, ಸೋಲು-ಗೆಲವು ಎಲ್ಲವನ್ನೂ ಸಂಭ್ರಮಿಸುವ ಟೈಂ ಬಂದೇ ಬಿಟ್ಟಿದೆ. IPL ಕಿರೀಟ ಗೆಲ್ಲುವುದಕ್ಕೆ 10 ತಂಡದ ಆಟಗಾರರೆಲ್ಲಾ ಪ್ರಾಕ್ಟೀಸ್ ಮೂಲಕ ಸಜ್ಜಾಗುತ್ತಿದ್ದಾರೆ. ಐಪಿಎಲ್ನಲ್ಲಿ ಧೂಳೆಬ್ಬಿಸೋಕೆ ಪಾಕಿಸ್ತಾನದ ಫಾಸ್ಟ್ ಬೌಲರ್ ಕೂಡ ರೆಡಿಯಾಗಿದ್ದಾರೆ.
ಅರೆ..! IPLನಲ್ಲಿ ಪಾಕ್ ಆಟಗಾರನಾ ಎಂದು ಮೂಗು ಮೇಲೆ ಬೆರಳಿಟ್ಟುಕೊಳ್ಳಬೇಡಿ. ಇದು ನಿಜ. ಪಾಕಿಸ್ತಾನ ತಂಡದ ಮಾಜಿ ವೇಗಿ ಮೊಹಮ್ಮದ್ ಅಮೀರ್ IPL ಆಡುವುದಕ್ಕೆ ರೆಡಿ ಆಗಿದ್ದಾರೆ. ಪಾಕಿಸ್ತಾನದ ಚಾನಲ್ವೊಂದರ ಸಂದರ್ಶನದಲ್ಲಿ ಮಾತನಾಡಿದ ಮೊಹಮ್ಮದ್ ಅಮೀರ್ ನಾನು ಮುಂದಿನ ವರ್ಷ ಐಪಿಎಲ್ ಆಡುವುದಕ್ಕೆ ಅರ್ಹನಾಗಿರುತ್ತೇನೆ. ಹೀಗಾಗಿ ಮಿನಿ ಹರಾಜಿಗಾಗಿ ಹೆಸರು ನೊಂದಾಯಿಸಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಲ್ಲಿಗೆ ಮುಂದಿನ ವರ್ಷ 2026ರ ಐಪಿಎಲ್ ಟೂರ್ನಿಯಲ್ಲಿ ಪಾಕಿಸ್ತಾನದ ಫಾಸ್ಟ್ ಬೌಲರ್ ಮೊಹಮ್ಮದ್ ಅಮೀರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಪಾಕಿಸ್ತಾನದ ಆಟಗಾರರನ್ನ IPLನಿಂದ ಬ್ಯಾನ್ ಮಾಡಲಾಗಿದೆ. ನಿಷೇಧದ ನಡುವೆಯೂ ಮೊಹಮ್ಮದ್ ಅಮೀರ್ IPL ಆಡುತ್ತೇನೆ ಎಂದಿದ್ದಾರೆ. ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಬಹುತೇಕರಿಗೆ ಕಾಡುತ್ತಿದೆ. ಮೊಹಮ್ಮದ್ ಅಮೀರ್ ಐಪಿಎಲ್ ಹರಾಜಿಗೆ ಹೆಸರು ರಿಜಿಸ್ಟರ್ ಮಾಡಿಸುತ್ತಿರೋದು ಪಾಕಿಸ್ತಾನದ ಪ್ರಜೆ ಆಗಿ ಅಲ್ಲ. ಬದಲಿಗೆ ಯುಕೆ ಪ್ರಜೆಯಾಗಿ. ಅಮೀರ್ ಪತ್ನಿ ನರ್ಗೀಸ್ ಯುಕೆ ಪ್ರಜೆ ಆಗಿದ್ದಾರೆ. ಹೀಗಾಗಿ ಮೊಹಮ್ಮದ್ ಅಮೀರ್ ಕೂಡ ಯುಕೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲೇ ಪೌರತ್ವ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಯುಕೆ ಪೌರತ್ವ ಸಿಗುತ್ತಿದ್ದಂತೆ ಪಾಕಿಸ್ತಾನ ತೊರೆಯಲಿದ್ದಾರೆ. ಮುಂದಿನ ವರ್ಷದ IPL ಹರಾಜಿಗೆ ಯುಕೆ ಪ್ರಜೆಯಾಗಿ ಹೆಸರು ರಿಜಿಸ್ಟರ್ ಮಾಡಿಕೊಳ್ಳಲಿದ್ದಾರೆ.
2008ರಲ್ಲಿ IPLನ ಮೊದಲ ಸೀಸನ್ನಲ್ಲಿ ಪಾಕ್ ಆಟಗಾರರು ಕಾಣಿಸಿಕೊಂಡಿದ್ರು. ಅದೇ ಫಸ್ಟ್, ಅದೇ ಲಾಸ್ಟ್. ಇದಾದ ಬಳಿಕ 2008 ನವೆಂಬರ್ 26ರಂದು ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟವಾಗಿತ್ತು. ತಾಜ್ ಹೋಟೆಲ್, ಶಿವಾಜಿ ಟರ್ಮಿನಲ್ ಸೇರಿದಂತೆ 12 ಕಡೆ ಸರಣಿ ಬಾಂಬ್ ಸ್ಫೋಟಿಸಲಾಗಿತ್ತು. 170ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಭಯೋತ್ಪಾದಕ ದಾಳಿಯಿಂದಾಗಿ ಭಾರತ ಹಾಗು ಪಾಕ್ ನಡುವಿನ ಸಂಬಂಧ ಮತ್ತಷ್ಟು ಹಳಸಿತ್ತು. ನಂತರ ಪಾಕ್ ಆಟಗಾರರನ್ನು ಬಿಸಿಸಿಐ ಐಪಿಎಲ್ನಿಂದ ನಿಷೇಧ ಮಾಡಿತು.
ಈ ಹಿಂದೆ ಪಾಕ್ನ ಮಾಜಿ ಆಲ್ರೌಂಡರ್ ಅಜರ್ ಮೊಹಮ್ಮದ್ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ರು. ಯುಕೆ ಪೌರತ್ವ ಪಡೆದಿದ್ದ ಅಜರ್ ಮೊಹಮ್ಮದ್ 2012, 2013ರಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಪರ, 2015ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಆಟ ಆಡಿದ್ದರು. ಇದೀಗ ಮೊಹಮ್ಮದ್ ಅಮೀರ್ ಐಪಿಎಲ್ ಆಡುವುದಕ್ಕಾಗಿ ಪಾಕಿಸ್ತಾನದ ಪೌರತ್ವವನ್ನೇ ತ್ಯಜಿಸುತ್ತಿದ್ದಾರೆ. ಯುಕೆ ಪೌರತ್ವ ಪಡೆದು ಐಪಿಎಲ್ ಆಡುವುದಕ್ಕೆ ಕಾಯುತ್ತಿದ್ದಾರೆ. ಆರ್ಸಿಬಿ ತಂಡದ ಬಿಗ್ ಫ್ಯಾನ್ ಎಂದುತ ಹೇಳಿಕೊಂಡಿರುವ ಮೊಹಮ್ಮದ್ ಅಮೀರ್, ವಿರಾಟ್ ಕೊಹ್ಲಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಆರ್ಸಿಬಿ ತಂಡದಲ್ಲೇ ಆಡಬೇಕು ಎನ್ನುವ ಕನಸಿದೆ ಎಂದು ಹೇಳಿಕೊಂಡಿದ್ದಾರೆ.
ಪ್ರಶಾಂತ್ ಎಸ್ , ಸ್ಪೇಷಲ್ ಡೆಸ್ಕ್, ಗ್ಯಾರಂಟಿ ನ್ಯೂಸ್