ಈಗ ಭಾರತ ಒಂದಲ್ಲ, ಎರಡು ಐಸಿಸಿ ಟ್ರೋಫಿ ಗೆದ್ಕೊಂಡಿದೆ. ಇನ್ನೆರಡು ರನ್ನರ್ ಅಪ್ ಆಗಿದೆ. ಏಷ್ಯಾ ಕಪ್ ಗೆದ್ದಿದೆ. ಹಾಗೆ ಭಾರತ ಗೆದ್ದಾಗಲೆಲ್ಲ ಭಾರತೀಯ ಕ್ರಿಕೆಟ್ ಆಟಗಾರರು ಈ ಹುಡುಗನ ಕೈಗೆ ಟ್ರೋಫಿ ತಂದುಕೊಟ್ಟು ಸಂಭ್ರಮಿಸ್ತಾರೆ. ಭಾರತ ತಂಡದ ಗೆಲುವಿನ ತೆರೆಮರೆಯ ಹೀರೋ.. ಇದೇ ರಾಘು. ರಘು ದಿವಗಿ ಅಲಿಯಾಸ್ ರಾಘವೇಂದ್ರ ದಿವಗಿ. ಕನ್ನಡದ ಹುಡುಗ. ಉತ್ತರ ಕರ್ನಾಟಕದವರು.
ಭಾರತೀಯ ಕ್ರಿಕೆಟ್ ತಂಡದ ಥ್ರೋಬಾಲ್ ಸ್ಪೆಷಲಿಸ್ಟ್ ಈತ. 120.. 130 ಕಿ.ಮೀ. ವೇಗದಲ್ಲಿ ಬರೋ ವೇಗದ ಬೌಲರುಗಳ ಬಾಲ್‌ಗಳನ್ನು ಕ್ಷಣಮಾತ್ರದಲ್ಲಿ ಗುರುತಿಸಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಂತವರೆಲ್ಲ ಫೋರು, ಸಿಕ್ಸು ಹೊಡೀತಾರಲ್ಲ.. ಅದರ ಹಿಂದಿನ ಶಕ್ತಿಯೇ ಈ ರಾಘವೇಂದ್ರ ದಿವಗಿ.
ಒಂದಾನೊಂದು ಕಾಲದಲ್ಲಿ ಜೇಬಿನಲ್ಲಿ 21 ರೂಪಾಯಿ ಇಟ್ಟುಕೊಂಡು ಮನೆ ಬಿಟ್ಟಿದ್ದ ರಘು, ಈಗ ಲಕ್ಷಾಧೀಶ್ವರ. ಕ್ರಿಕೆಟರ್ ಆಗಬೇಕು ಎನ್ನುವ ಆಸೆ ಇಟ್ಟುಕೊಂಡು ಬಂದ ಹುಡುಗನನ್ನು ಒಂದು ಸಣ್ಣ ಅಪಘಾತ, ಕ್ರಿಕೆಟರ್ ಆಗುವ ಆಸೆಯನ್ನೇ ಹೊಸಕಿ ಹಾಕಿತ್ತು. ಮೆಟ್ಟಿಲ ಮೇಲೆ ಜಾರಿ ಬಿದ್ದ ರಘುವಿನ ಮೂಳೆ ಫ್ರಾಕ್ಚರ್ ಆಗಿತ್ತು. ಕ್ರಿಕೆಟರ್ ಆಗುವ ಆಸೆ ಬಿಟ್ಟ ರಘು, ಕ್ರಿಕೆಟ್ ಮೇಲಿನ ಆಸೆಯನ್ನ ಮಾತ್ರ ಬಿಡಲಿಲ್ಲ.
ಹುಬ್ಬಳ್ಳಿಯಲ್ಲಿದ್ಧಾಗ ಇರುವುದಕ್ಕೆ ಸಣ್ಣ ರೂಂ ಕೂಡಾ ಇಲ್ಲದೆ, ಸ್ಮಶಾನದಲ್ಲಿ ಮಲಗುತ್ತಿದ್ದವರನ್ನು ಪರಿಚಿತರೊಬ್ಬರು ಬೆಂಗಳೂರಿಗೆ ಕರೆತಂದು, ಚಿನ್ನಸ್ವಾಮಿ ಸ್ಟೇಡಿಯಮ್ಮಿಗೆ ಬಿಟ್ಟರು. ಅಲ್ಲಿ ಜಾವಗಲ್ ಶ್ರೀನಾಥ್ ಕಣ್ಣಿಗೆ ಬಿದ್ದ ಹುಡುಗ, ರಣಜಿ ತಂಡದವರ ಜೊತೆ ತರಬೇತುದಾರರ ಟೀಮಿನಲ್ಲಿದ್ದರು.
ಮುಂದೊಂದು ದಿನ ಈತ ಸಚಿನ್ ತೆಂಡೂಲ್ಕರ್ ಕಣ್ಣಿಗೆ ಬಿದ್ದ ನಂತರ ಈತನ ಹಣೆಬರಹವೇ ಬದಲಾಗಿ ಹೋಯ್ತು. ಅದಕ್ಕೆ ಕಾರಣ ರಘು ದಿವಗಿ, ನಿಂತಲ್ಲೇ ಬಾಲ್ ಎಸೆಯುವ ವೇಗ ಮಿನಿಮರ್ 150 ಕಿ.ಮೀ. ಅಷ್ಟು ವೇಗವಾಗಿ ಚೆಂಡು ಎಸೆಯಬಲ್ಲ ಹುಡುಗ, ಖಂಡಿತಾ ಟೀಂ ಇಂಡಿಯಾಕ್ಕೆ ಆಸರೆಯಾಗ್ತಾನೆ ಎಂದುಕೊಂಡ ತೆಂಡೂಲ್ಕರ್, ಸುಮಾರು 15 ವರ್ಷಗಳಿಂದ ಟೀಂ ಇಂಡಿಯಾದ ವಜ್ರವಾಗಿದ್ದೇ ರೋಚಕ.
ತೆಂಡೂಲ್ಕರ್ ಅವರಿಂದ ಶುರುವಾದ ರಘು ಅವರ ಟೀಂ ಇಂಡಿಯಾ ಕ್ರಿಕೆಟ್ ಲೈಫಿನಲ್ಲಿ ಸೆಹ್ವಾಗ್, ದ್ರಾವಿಡ್, ಧೋನಿ ಅವರೆಲ್ಲ ಬಂದು ಹೋಗಿದ್ದಾರೆ. ಕೊಹ್ಲಿ, ರೋಹಿತ್, ಕೆಎಲ್ ರಾಹುಲ್, ಹಾರ್ದಿಕ್, ಸೂರ್ಯ, ಇದೀಗ ಶುಭಮನ್ ಗಿಲ್.. ಹೀಗೆ ಜನರೇಷನ್ ಬದಲಾದಂತೆ ರಘು, ಟೀಂ ಇಂಡಿಯಾದ ಆಸ್ತಿಯಾಗಿ ಹೋಗಿದ್ಧಾರೆ.
ಆಟಗಾರರು ಬಯಸಿದಂತೆ ವೇಗವಾಗಿ ಥ್ರೋಬಾಲ್ ಮಾಡೋ ರಘುಗೆ, ಆಟಗಾರರ ಪ್ಲಸ್ ಮತ್ತು ಮೈನಸ್ ಚೆನ್ನಾಗಿ ಗೊತ್ತು. ಆಟಗಾರರ ಬ್ಯಾಟಿಂಗ್ ಸ್ಟೈಲಿನಲ್ಲಿ ಮಿಲಿ ಮೀಟರ್ ವ್ಯತ್ಯಾಸವಾದರೂ ಪಕ್ಕಾ ಗುರುತಿಸುವ ರಘು, ಬೆಂಕಿ ಬೌಲರ್ ಜಸ್ ಪ್ರೀತ್ ಬೂಮ್ರಾ, ಮಹಮ್ಮದ್ ಶಮಿಗೂ ಅಚ್ಚುಮೆಚ್ಚು. ಈ ರಘು ಬಂದ ಮೇಲೆಯೇ ವಿದೇಶದಲ್ಲಿ ಪರದಾಡುತ್ತಿದ್ದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ನುಗಳ ಖದರ್ ಚೇಂಜ್ ಆಗಿದ್ದು.
ರಘು ಅವರಲ್ಲಿ ಪಳಗಿದ ಮೇಲೆ ರೋಹಿತ್ ಶರ್ಮಾ ಆಟದ ಖದರ್ ಚೇಂಜ್ ಆಗಿದ್ದು. ಸಿಕ್ಸರುಗಳು ಆಕಾಶ ಮುಟ್ಟಿದ್ದು. ರಘು ಅವರ ಸ್ಪೆಷಾಲಿಟಿ ಏನಂದ್ರೆ, ಥ್ರೋಬಾಲಿನಲ್ಲಿ ಕೂಡಾ ರಘು ಸ್ವಿಂಗ್ ಮಾಡ್ತಾರೆ. ಅದು ಆಟಗಾರರಿಗೆ ಪಕ್ಕಾ ಪರ್ಫೆಕ್ಷನ್ ಕೊಡುತ್ತೆ. ತಮ್ಮ ಬ್ಯಾಟಿಂಗ್ ದಾಖಲೆಗಳ ಹಿಂದೆ ರಘು ಅವರ ಶ್ರಮ ದೊಡ್ಡದು ಎಂದು ಕೊಹ್ಲಿ ಕ್ರೆಡಿಟ್ ಕೊಟ್ಟಿದ್ದಾರೆ.
ಕೆಎಲ್ ರಾಹುಲ್ ಅವರಂತೂ, ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮಗೆ ಬಂದ ವೈಟ್ ಜಾಕೆಟ್ಟನ್ನ ರಘುಗೆ ತೊಡಿಸಿ ಸಂಭ್ರಮಿಸಿದ್ದಾರೆ.
ತೀರಾ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಟೀಂ ಇಂಡಿಯಾ ಆಟಗಾರರಿದ್ದ ಬಸ್ಸಿಗೆ ಹೋಗೋಕೆ ಬಂದಾಗ, ಪೊಲೀಸರು ಇವನ್ಯಾರೋ ಗೊತ್ತಿಲ್ಲ ಎಂದು ತಡೆದಿದ್ದ ವಿಡಿಯೋ ವೈರಲ್ ಆಗಿತ್ತು. ಮೀಡಿಯಾದವರೇ .. ಅಯ್ಯೋ.. ಸಾರ್, ಇವರು ಟೀಂ ಇಂಡಿಯಾ ಕೋಚ್ ಟೀಮಿನವರು. ಬಿಡಿ ಎಂದು ಡೀಟೈಲ್ಸ್ ಹೇಳಿದಾಗ ತಡೆದು ನಿಲ್ಲಿಸಿದ್ದ ಪೊಲೀಸರೇ, ಸಾರಿ ಕೇಳಿ ಕರೆದುಕೊಂಡು ಹೋಗಿದ್ದರು.
ರಘು ಅವರು ಕೊಡುವ ಸಲಹೆಗಳನ್ನ ಪ್ರಧಾನ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಕೂಡಾ ಸೀರಿಯಸ್ಸಾಗಿ ಕೇಳಿಸ್ಕೊಳ್ತಾ ಇದ್ರು. ಇನ್ನು ವಿರಾಟ್, ರೋಹಿತ್ ಅವರ ವಿಷಯವಂತೂ ಬಿಡಿ. ಕಳೆದ ಸಲ ವಿಶ್ವಕಪ್ ಗೆದ್ದಾಗ ಆಟಗಾರರಿಗೆ ಒಂದು ರೀತಿಯ ಬಹುಮಾನ, ಕೋಚ್ ಸಿಬ್ಬಂದಿಗೆ ಕಡಿಮೆ ಬಹುಮಾನ ಘೋಷಿಸಿದ್ದಾಗ.. ರೋಹಿತ್ ಶರ್ಮಾ ಹಠ ಹಿಡಿದು ತಮಗೆ ಸಿಕ್ಕಷ್ಟೇ ಬಹುಮಾನವನ್ನು ಕೋಚ್ ಸಿಬ್ಬಂದಿಗೂ ಕೊಡಿಸಿದ್ದರು. ಅದಕ್ಕೆ ಮೂಲ ಕಾರಣವೇ ರಘು ಅವರ ಮೇಲಿನ ಪ್ರೀತಿ. ಈಗಲೂ ಅಷ್ಟೇ.. ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ. ಕೋಚ್ ಗೌತಮ್ ಗಂಭೀರ್. ಆದರೆ.. ಆಟಗಾರರು ಮಾತ್ರ, ರಘು ಅವರನ್ನೇ ಮಾಸ್ಟರ್ ಅಂತಾರೆ.