ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬೌಲರ್‌ಗಳು ಶಕ್ತಿಶಾಲಿ ದಾಳಿಯನ್ನು ನಡೆಸಿದರೆ, ಬ್ಯಾಟರ್‌ಗಳು ಜವಾಬ್ದಾರಿಯುತ ಆಟವಾಡಿದರು. ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯರ ಜುಗಲ್‌ಬಂದಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ಮುಖಭಂಗ ಅನುಭವಿಸಿತು. ಈ ಗೆಲುವಿನೊಂದಿಗೆ ಚಿನ್ನಸ್ವಾಮಿಯ ಸೋಲಿಗೆ ಸೇಡು ತೀರಿಸಿಕೊಂಡ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿಗೆ ಚೇಸಿಂಗ್ ಸುಲಭವಾಗಿರಲಿಲ್ಲ. ಫಿಲ್ ಸಾಲ್ಟ್ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿದ ಜೇಕಬ್ ಬೆಥಲ್, 1 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 12 ರನ್ ಗಳಿಸಿ ಆಕ್ರಮಣಕಾರಿಯಾಗಿ ಕಾಣಿಸಿದರು. ಆದರೆ, ಆಕ್ಷರ್ ಪಟೇಲ್ ಅವರನ್ನು ಔಟ್ ಮಾಡಿ ಬ್ರೇಕ್ ಹಾಕಿದರು.
ಬೆಥಲ್ ಬೆನ್ನಿಗೆ ಬಂದ ದೇವದತ್ ಪಡಿಕ್ಕಲ್ ಶೂನ್ಯಕ್ಕೆ ಪೆವಿಲಿಯನ್‌ಗೆ ಮರಳಿದರು. ರಜತ್ ಪಾಟಿದಾರ್ 6 ರನ್‌ಗಳಿಗೆ ರನೌಟ್ ಆದರು. 26 ರನ್‌ಗಳಿಗೆ 3 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಜೊತೆಯಾದ ಕೃನಾಲ್ ಪಾಂಡ್ಯ ತಂಡಕ್ಕೆ ಆಸರೆಯಾದರು.
ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಕೃನಾಲ್, ಸೆಟ್ ಆದ ನಂತರ ಡೆಲ್ಲಿ ಬೌಲರ್‌ಗಳ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದರು. 47 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 73 ರನ್ ಗಳಿಸಿದರು. ಅತ್ತ, ಕೊಹ್ಲಿ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಿ, 45 ಎಸೆತಗಳಲ್ಲಿ 50 ರನ್ ಪೂರೈಸಿ ಈ ಟೂರ್ನಿಯ 6ನೇ ಅರ್ಧಶತಕ ದಾಖಲಿಸಿದರು.
ಕೃನಾಲ್ ಜೊತೆ 119 ರನ್‌ಗಳ ಜೊತೆಯಾಟವಾಡಿದ ವಿರಾಟ್ ಕೊಹ್ಲಿ, ಗೆಲುವಿನ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರು. ಆಗ ಬಂದ ಟಿಮ್ ಡೇವಿಡ್, 5 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ನೊಂದಿಗೆ 19 ರನ್ ಸಿಡಿಸಿ ಪಂದ್ಯವನ್ನು ಮುಗಿಸಿದರು. ಇದರೊಂದಿಗೆ ಆರ್‌ಸಿಬಿ 18.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು, ಮತ್ತು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.