ಬಡವರ ಮನೆಗಳಲ್ಲೇ ಸಾಧನೆ ಹುಟ್ಟುತ್ತದೆ. ಹಸಿವು ಇದ್ದ ಮನೆಯಲ್ಲೇ ಸಾಧಕರು ಹುಟ್ಟುತ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ರೋಹಿತ್ ಶರ್ಮಾ. ಹಿಟ್ ಮ್ಯಾನ್. ಟೀಂ ಇಂಡಿಯಾ ಕ್ಯಾಪ್ಟನ್. ಈಗ ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ಪ್ರೇಮಿಗಳ ಡಾರ್ಲಿಂಗ್. ಏಕೆಂದರೆ ಹೆಚ್ಚೂ ಕಡಿಮೆ ಒಂದು ದಶಕಗಳ ಕಾಲ ಭಾರತಕ್ಕೆ ಕನಸೇ ಆಗಿ ಹೋಗಿದ್ದ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ನಾಯಕ.
ಒಂದು ಟಿ-20 ವಿಶ್ವಕಪ್ , ಒಂದು ಚಾಂಪಿಯನ್ಸ್ ಟ್ರೋಫಿ ಕಪ್ ಅಲ್ಲದೆ ಒಂದು ಏಷ್ಯಾ ಕಪ್ ಕೂಡಾ ಗೆಲ್ಲಿಸಿಕೊಟ್ಟಿರೋ ದಿಗ್ಗಜ. ಒಂದು ಏಕದಿನ ಹಾಗೂ ಎರಡು ಟೆಸ್ಟ್ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ರನ್ನರ್ ಅಪ್ ಕೂಡಾ ಹೌದು. ಈತನ ಖಾತೆಯಲ್ಲಿ ಒಂದಲ್ಲ.. ಎರಡಲ್ಲ.. 6 ಐಪಿಎಲ್ ಟ್ರೋಫಿಗಳಿವೆ. ಇಷ್ಟೆಲ್ಲ ಗೆದ್ದಿರೋ ಆಟಗಾರನ ಆರಂಭದ ದಿನಗಳು ಮಾತ್ರ ಸುಲಭವಾಗಿರಲಿಲ್ಲ.
ರೋಹಿತ್ ಶರ್ಮಾ ಈಗ ನೂರಾರು ಕೋಟಿಗಳ ಮಾಲೀಕನಾಗಿರಬಹುದು. ಹುಟ್ಟಿದ್ದು ಮಾತ್ರ ಎರಡು ಹೊತ್ತು ಊಟಕ್ಕೂ ಕಷ್ಟವಾಗಿದ್ದ ಬಡತನದಲ್ಲಿ. ಈತನ ತಂದೆಯ ಹೆಸರು ಗುರುನಾಥ್ ಶರ್ಮಾ. ಮುಂಬೈನವರೇ. ತಾಯಿ ಪೂರ್ಣಿಮಾ ಶರ್ಮಾ. ತೆಲುಗಿನವರು. ಶ್ರೀಮಂತಿಕೆಯ ಮಾತು ಬಿಡಿ, ಎರಡು ಹೊತ್ತು ಊಟ ಸಿಕ್ಕರೆ ಅದೇ ವೈಭವ. ಅಪ್ಪ ಗುರುನಾಥ್ ಶರ್ಮಾ, ಸ್ಟೋರ್ ಕೀಪರ್ ಸೆಕ್ಯುರಿಟಿ ಗಾರ್ಡ್ ಆಗಿದ್ದರು.
ಮುಂಬೈನ ಬೊರಿವಿಲಿಯಲ್ಲಿ ಮನೆ. ರೋಹಿತ್ ಶರ್ಮಾಗೆ ಎರಡು ವರ್ಷ ವಯಸ್ಸಿದ್ದಾಗ ಆತನನ್ನ ತಮ್ಮ ತಂದೆಯ ಮನೆಯಲ್ಲಿ ಬಿಟ್ಟು ಬೆಳೆಸಿದರು. ಕಾರಣ ಬೇರೇನಿಲ್ಲ. ಅವರಿದ್ದ ಮನೆ 10 ಅಡಿ ಉದ್ದ, 10 ಅಡಿ ಅಗಲ. ಅಷ್ಟೇ. ಮನೆಯಲ್ಲಿ ಮಕ್ಕಳಿದ್ದರೆ ಮಲಗುವುದಕ್ಕೂ ಜಾಗ ಸಾಲ್ತಾ ಇರಲಿಲ್ಲ. ರೋಹಿತ್ ಶರ್ಮಾ ಓದಿದ್ದು ಬೆಳೆದಿದ್ದು ಎಲ್ಲ ತಾತ ಅಜ್ಜಿಯ ಜೊತೆ.
ಸ್ಕೂಲಿಗೆ ಹೋಗುವುದೇ ಕಷ್ಟವಾಗಿದ್ದಾಗ ಕ್ರಿಕೆಟ್ ಕೋಚಿಂಗ್ ಎಲ್ಲಿಂದ ಬರಬೇಕು. ಒಂದ್ಸಲ ರೋಹಿತ್ ಶರ್ಮಾ ಚಿಕ್ಕಪ್ಪ ದುಡ್ಡು ಕೊಟ್ಟು ಬೇಸಗೆ ಕ್ರಿಕೆಟ್ ಕೋಚಿಂಗ್‌ಗೆ ಸೇರಿಸಿದ್ರಂತೆ. ಅಲ್ಲಿಗೆ ಕೋಚಿಂಗ್ ಹೇಳಿಕೊಡೋಕೆ ಬಂದಿದ್ದ ದಿನೇಶ್ ಲಾಡ್ ಅನ್ನೋ ಕೋಚ್‌ಗೆ ರೋಹಿತ್ ಶರ್ಮಾ ಬ್ಯಾಟಿಂಗ್ ಇಷ್ಟವಾಯ್ತು.
ಈ ಹುಡುಗನನ್ನ ತಾವು ರೆಗ್ಯುಲರ್ ಆಗಿ ಕೋಚಿಂಗ್ ಕೊಡ್ತಿದ್ದ ಸ್ಕೂಲಿಗೆ ಸೇರಿಕೊಳ್ಳೋಕೆ ಹೇಳಿದ್ರಂತೆ. ಆದರೆ ರೋಹಿತ್ ಶರ್ಮಾ ಮನೆಯಲ್ಲಿ ಅಷ್ಟೊಂದು ಫೀಸ್ ಕಟ್ಟೋಕೆ ದುಡ್ಡಿರಲಿಲ್ಲ. ಕೊನೆಗೆ ಆ ಕೋಚ್, ತಾವೇ ದುಡ್ಡು ಕಟ್ಟಿ ಕೋಚಿಂಗ್ ಸೆಂಟರಿಗೆ ಸೇರಿಸ್ತಾರೆ. ಸ್ಕಾಲರ್ ಶಿಪ್ ಸಿಗೋ ವ್ಯವಸ್ಥೆ ಮಾಡ್ತಾರೆ. ಹೀಗೆ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ರೋಹಿತ್ ಶರ್ಮಾ, ಕ್ರಿಕೆಟ್ ಜರ್ನಿ ಶುರು ಮಾಡಿದ್ದು ಆಫ್ ಸ್ಪಿನ್ನರ್ ಬೌಲರ್ ಆಗಿ. ಆದರೆ ಸಕ್ಸಸ್ ಕಂಡಿದ್ದು ಬ್ಯಾಟ್ಸ್‌ಮನ್ ಆಗಿ. ಕಾಲೇಜು ಮ್ಯಾಚುಗಳಲ್ಲಿ ನೀಡಿದ ಪ್ರದರ್ಶನ, ರಾಜ್ಯ ತಂಡಕ್ಕೆ ಸೆಲೆಕ್ಟ್ ಆಗುವಂತೆ ಮಾಡ್ತು.
2005ರಲ್ಲಿ ದೇವಧರ್ ಕ್ರಿಕೆಟ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ದೇಸೀ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದರು. ಆ ಪಂದ್ಯದಲ್ಲೇ ಚೇತೇಶ್ವರ ಪೂಜಾರ, ರವೀಂದ್ರ ಜಡೇಜಾ ಕೂಡಾ ಪಾದಾರ್ಪಣೆ ಮಾಡಿದರು. ಅಲ್ಲಿಂದ ಶುರುವಾದ ಕ್ರಿಕೆಟ್ ಜರ್ನಿ ಈಗ ಟೀಂ ಇಂಡಿಯಾ ಕಂಡ ಯಶಸ್ವಿ ಕ್ಯಾಪ್ಟನ್ ಎಂಬಲ್ಲಿಗೆ ತಂದು ನಿಲ್ಲಿಸಿದೆ.
ಅಲ್ಲಿಂದ ಮುಂದೆ ತೆಂಡೂಲ್ಕರ್ ಕೂಡಾ ಮೆಚ್ಚಿಕೊಂಡ ಆಟಗಾರನಾದ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ಟಿಗೆ ಎಂಟ್ರಿ ಕೊಟ್ಟಿದ್ದು ಸಚಿನ್ ತೆಂಡೂಲ್ಕರ್ ನಿವೃತ್ತಿ ಹೇಳಿದ ಆ ಪಂದ್ಯದಲ್ಲೇ. ಇನ್ನು 2007ರ ಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾಗೆ ಫೈನಲ್ ಆಡೋ ಅದೃಷ್ಟ ಇರಲಿಲ್ಲ. ಪ್ರಾಕ್ಟೀಸ್ ವೇಳೆ ಗಾಯಾಳುವಾಗಿ ಫೈನಲ್ ಪಂದ್ಯವನ್ನ ಮಿಸ್ ಮಾಡಿಕೊಂಡಿದ್ರು ರೋಹಿತ್. ಆದರೆ ಟ್ರೋಫಿ ಗೆದ್ದ ಟೀಮಿನಲ್ಲಿ ಒಬ್ಬರಾಗಿದ್ರು.
ಇನ್ನು 5..6..7ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಬರುತ್ತಿದ್ದ ರೋಹಿತ್ ಶರ್ಮಾಗೆ ದೊಡ್ಡ ಇನ್ನಿಂಗ್ಸ್ ಆಡುವ, ದೊಡ್ಡ ಸ್ಕೋರ್ ಮಾಡುವ ಅವಕಾಶ ಸಿಗ್ತಾ ಇರಲಿಲ್ಲ. ಹೀಗಾಗಿ ತಂಡಕ್ಕೆ ಹೋಗಿ ಬಂದು ಮಾಡುತ್ತಿದ್ದ ರೋಹಿತ್ ಶರ್ಮಾರ ಹಣೆಬರಹ ಬದಲಿಸಿದ್ದು ಧೋನಿ.
ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ ಎಂಟ್ರಿ ಕೊಟ್ಟ ಮೇಲೆ ಭಾರತದ ಕ್ರಿಕೆಟ್ ಚರಿತ್ರೆಯೇ ಬದಲಾಗಿದ್ದು ಇತಿಹಾಸ. ಒಂದು ಕಾಲದಲ್ಲಿ 10/10ಮನೆಯಲ್ಲಿದ್ದ ರೋಹಿತ್ ಶರ್ಮಾ ಬಳಿ ಈಗ ಬಂಗಲೆ ಇದೆ. ಮೆಟ್ರೋ ಹತ್ತೋಕೂ ದುಡ್ಡಿಲ್ಲದೆ ಪರದಾಡ್ತಿದ್ದ ರೋಹಿತ್ ಬಳಿ, ಈಗ ಕೋಟಿ ಕೋಟಿ ಬೆಲೆಯ ಕಾರುಗಳಿವೆ. ಕ್ರಿಕೆಟ್ ಕಿಟ್ ತಗೊಳ್ಳೋಕೂ ಪರದಾಡ್ತಿದ್ದ ರೋಹಿತ್ ಬಳಿ, ಈಗ ಕ್ಯಾಪ್ಟನ್ ಆಗಿಯೇ ಎರಡು ಐಸಿಸಿ ಕಪ್. 6 ಐಪಿಎಲ್ ಟ್ರೋಫಿಗಳಿವೆ.
ಅಂದಹಾಗೆ ಫೈನಲ್ಲಾಗಿ ಹೇಳ್ಬೇಕಂದ್ರೆ ರೋಹಿತ್ ಶರ್ಮಾ ಜೆರ್ಸಿ ನಂ.45 ಇದ್ಯಲ್ಲ, ಅದು ರೋಹಿತ್ ಅವರ ತಾಯಿಗೆ ಇಷ್ಟವಾದ ನಂಬರ್ ಅಂತೆ. ಆ ನಂಬರ್ ಹಿಂದೆ ಕಣ್ಣೀರಿನ ಕಥೆ ಇದ್ಯಂತೆ. ಅದನ್ನ ರೋಹಿತ್ ಶರ್ಮಾ ಹೇಳೋದಿಲ್ಲ. ಆದರೆ 45 ಮಾತ್ರ ರೋಹಿತ್ ಜೆರ್ಸಿಯಲ್ಲಿದೆ.