ವುಮೆನ್ಸ್ ಪ್ರೀಮಿಯರ್ ಲೀಗ್ನ ಮೂರನೇ ಆವೃತ್ತಿ ಫೆಬ್ರವರಿ 14 ರಿಂದ ಪ್ರಾರಂಭವಾಗಲಿದೆ. ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿದೆ. ಆದರೆ ಈ ಬಾರಿಯ ಟೂರ್ನಿಗೆ ಆರ್ಸಿಬಿ ತಂಡದ ಪ್ರಮುಖ ಆಲ್‌ರೌಂಡರ್ ಸೋಫಿ ಡಿವೈನ್ ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕಣಕ್ಕಿಳಿಯಲ್ಲ ಎಂದು ವರದಿಯಾಗಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-3 ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ. ಸೋಫಿ ಡಿವೈನ್ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿರುವುದರಿಂದ ಅವರು ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದಿಲ್ಲ. ಈ ಸುದ್ದಿಯನ್ನು ನ್ಯೂಜಿಲೆಂಡ್ ಕ್ರಿಕೆಟ್ ದೃಢಪಡಿಸಿದ್ದು ಆದರೆ ಸೋಫಿ ಡಿವೈನ್ ಯಾಕೆ ಆಡುತ್ತಿಲ್ಲ ಎನ್ನುವ ಬಗ್ಗೆ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ.
“ಆಟಗಾರರ ಯೋಗಕ್ಷೇಮ ನಮಗೆ ಮೊದಲ ಆದ್ಯತೆ, ಅದಕ್ಕೆ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು” ಎಂದು ಮಹಿಳಾ ಕ್ರಿಕೆಟ್ ಪ್ರದರ್ಶನ ಅಭಿವೃದ್ಧಿ ಮುಖ್ಯಸ್ಥೆ ಲಿಜ್ ಗ್ರೀನ್ ತಿಳಿಸಿದ್ದಾರೆ. ಸೋಫಿ ಡಿವೈನ್ಗೆ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರ ಸಂಘ ಮತ್ತು ನಮ್ಮ ಘಟಕದ ಸಿಬ್ಬಂದಿಯಿಂದ ಉತ್ತಮ ಬೆಂಬಲವಿದೆ. ಅವರಿಗೆ ಈಗ ವಿಶ್ರಾಂತಿಯ ಅಗತ್ಯವಿದೆ. ಫಿಟ್‌ನೆಸ್ ಮೇಲೆ ಅವರು ಕೆಲಸ ಮಾಡಲಿದ್ದಾರೆ” ಎಂದು ಹೇಳಿದ್ದಾರೆ.
ಸೋಫಿ ಡಿವೈನ್ ಕಳೆದ ಎರಡು ಸೀಸನ್ಗಳಲ್ಲಿ ಆರ್ಸಿಬಿ ಪರ ಆರಂಭಿಕಗಳಾಗಿ ಕಣಕ್ಕಿಳಿದಿದ್ದರು. ಈ ವೇಳೆ 18 ಇನಿಂಗ್ಸ್ ಆಡಿರುವ ಅವರು 2 ಅರ್ಧಶತಕಗಳೊಂದಿಗೆ ಒಟ್ಟು 402 ರನ್ ಕಲೆಹಾಕಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 9 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಸೋಫಿ ಡಿವೈನ್ ಹೊರಗುಳಿದಿರುವ ಕಾರಣ ಆರ್ಸಿಬಿ ಬದಲಿ ಆಲ್ರೌಂಡರ್ನನ್ನು ಆಯ್ಕೆ ಮಾಡಬೇಕಿದೆ.