ವಿರಾಟ್ ಕೊಹ್ಲಿ.. ಭಾರತದ ರನ್ ಮಷೀನ್. ದೊಡ್ಡ ಪಂದ್ಯಗಳಲ್ಲಿ ಒತ್ತಡದ ಸನ್ನಿವೇಶಗಳಲ್ಲಿ ತಂಡಕ್ಕೆ ಆಸರೆಯಾಗೋ ಆಟಗಾರ. ಸೂಪರ್ ಸ್ಟಾರ್ ಆಗಿದ್ರೂ ಕ್ರಿಕೆಟ್ ಅಂಗಳದಲ್ಲಿ ತಾನೇಕೆ ಸೂಪರ್ ಸ್ಟಾರ್ ಅನ್ನೋದನ್ನ ಪದೇಪದೆ ಪ್ರೂವ್ ಮಾಡೋ ಮಾಸ್ಟರ್. ಇಂತಾ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಮೀಸ್‌ನಲ್ಲಿ ಗೆಲುವಿಗೆ ಮುಖ್ಯ ಕಾರಣರಾಗಿದ್ದಾರೆ.
ಇಂಗ್ಲೀಷ್‌ನಲ್ಲಿ ಬಿಗ್ಗೆಸ್ಟ್ ಸ್ಟಾರ್ ವಿಲ್ ಪರ್ಫಾಮ್ ಆನ್ ಬಿಗ್ಗೆಸ್ಟ್ ಸ್ಟೇಜಸ್ ಅನ್ನೋ ಮಾತಿದೆ. ಅದು ವಿರಾಟ್ ಕೊಹ್ಲಿಯನ್ನ ನೋಡಿ ಹುಟ್ಟಿಕೊಂಡಿದ್ಯಾ ಅನ್ನೋ ಪ್ರಶ್ನೆ ಟೀಂ ಇಂಡಿಯಾ ಫ್ಯಾನ್ಸ್‌ಗೆ ಶುರುವಾಗಿದೆ. ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಕೊಹ್ಲಿ ಫಾರ್ಮ್‌ನಲ್ಲಿ ಇಲ್ಲ. ಇಂತೋರಿಗೆ ಟೀಂನಲ್ಲಿ ಚಾನ್ಸ್ ಕೊಟ್ಟಿದ್ಯಾಕೆ ಅನ್ನೋ ಪ್ರಶ್ನೆಯನ್ನ ಕೆಲವರು ಎತ್ತಿದ್ರು. ಆಗ ವಿರಾಟ್ ಕೊಹ್ಲಿ ಫಾರ್ಮ್ ಕೂಡ ಪಾತಾಳಕ್ಕೆ ಇಳಿದಿತ್ತು. ಈ ಟೂರ್ನಿಗೂ ಮುನ್ನ ಆಡಿದ್ದ 5 ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಒಂದೇ ಒಂದು ಅರ್ಧಶತಕ ಬಾರಿಸಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ತಮ್ಮ ಹೆಸರಿನಿಂದಾಗಿ ಟೀಂನಲ್ಲಿ ಇದ್ದಾರೆ. ಈತನಿಂದಾಗಿ ಉದಯೋನ್ಮುಖ ಆಟಗಾರರಿಗೆ ಚಾನ್ಸ್ ಕೊರತೆಯಾಗ್ತಿದೆ ಅನ್ನೋ ಟೀಕೆಗಳು ಕೇಳಿ ಬಂದಿದ್ದವು.
ಕೊಹ್ಲಿ ಆಗಷ್ಟೇ ಕ್ರಿಕೆಟ್ ಫೀಲ್ಡ್‌ಗೆ ಇಳಿದಿದ್ದ ಸಮಯದಲ್ಲಿ ಇಂತಾ ಟೀಕೆಗಳಿಗೆ ಟಾಂಗ್ ಕೊಡ್ತಿದ್ದರು. ಹೀಗಾಗಿ ಕೆಲವರ ಕೆಂಗಣ್ಣಿಗೂ ಗುರಿಯಾಗ್ತಿದ್ದರು. ಆದರೆ ಸಮಯ ಕಳೆದಂತೆ ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರ ನೀಡಲು ಶುರು ಮಾಡಿದ್ರು. ಅದನ್ನ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಕೇವಲ 22 ರನ್ ಗಳಿಸಿ ಔಟ್ ಆಗಿದ್ದರು. ಆಗಲ್ಲೂ ಟೀಕಾಕಾರರು ಕೊಹ್ಲಿಯನ್ನ ಟೀಕಿಸಲು ಶುರು ಮಾಡಿದ್ದರು. ಬಳಿಕ ಶುರುವಾಯ್ತು ನೋಡಿ ಕೊಹ್ಲಿಯ ಖದರ್. 2ನೇ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯ. ಹೈವೋಲ್ಟೇಜ್ ಜೊತೆಗೆ ಆಟಗಾರರಲ್ಲಿ ಹೈಪ್ರೆಷರ್ ಕೂಡ ಸೃಷ್ಟಿಸುತ್ತೆ. ಇಂತಾ ಸನ್ನಿವೇಶದಲ್ಲಿ ಸ್ಟಾರ್ ಆಗಿ ಮಿಂಚಿದ್ದೇ ಕಿಂಗ್ ಕೊಹ್ಲಿ.
ದೊಡ್ಡ ಸ್ಟೇಜ್‌ನಲ್ಲೇ ದೊಡ್ಡ ಸ್ಟಾರ್ ಮಿಂಚೋದು ಅನ್ನೋ ಮಾತಿನ ಜೊತೆಗೆ ಏಕದಿನ ಪಂದ್ಯಗಳಲ್ಲಿ ಕೊಹ್ಲಿಯನ್ನ ಚೇಸ್ ಮಾಸ್ಟರ್ ಅಂತಾ ಏಕೆ ಕರೀತಾರೆ ಅನ್ನೋದಕ್ಕೆ ಎಕ್ಸಾಂಪಲ್ ಕೂಡ ನೀಡಿದರು. ಒಂದೆಡೆ ಫಾರ್ಮ್ ಕೊರತೆ.. ಮತ್ತೊಂದೆಡೆ ಪಾಕ್ ವಿರುದ್ಧದ ಪಂದ್ಯ ಅನ್ನೋ ಒತ್ತಡ. ಇವೆಲ್ಲವನ್ನ ಸಮರ್ಥವಾಗಿ ನಿಭಾಯಿಸಿದ ವಿರಾಟ್ ಕೊಹ್ಲಿ, ಪಾಕ್ ವಿರುದ್ಧ ಭರ್ಜರಿ ಶತಕ ಗಳಿಸೋ ಮೂಲಕ ತಾನೇಕೆ ಚೇಸ್ ಮಾಸ್ಟರ್ ಅಂತಾ ಕರೆಸಿಕೊಳ್ತೀನಿ ಅಂತಾ ಟೀಕಾಕಾರಿಗೆ ಬ್ಯಾಟ್ ಮೂಲಕ ತೋರಿಸಿಕೊಟ್ಟಿದ್ದರು. ಜೊತೆಗೆ ಔಟ್ ಆಗದೇ ಶತಕ ಗಳಿಸಿ ಏಕದಿನ ಪಂದ್ಯಗಳ ಕಿಂಗ್ ಅರೈವ್ಡ್ ಅನ್ನೋ ಮೆಸೇಜ್ ಕೊಟ್ಟಿದ್ದರು.
ಮೂರನೇ ಪಂದ್ಯ ನ್ಯೂಜಿಲೆಂಡ್ ವಿರುದ್ಧ ನಡೆದಿತ್ತು. ಈ ಪಂದ್ಯದಲ್ಲಿ ಕೊಹ್ಲಿ ವಿಫಲರಾಗಿದ್ರು. ಇದಾದ ಬಳಿಕ ಮತ್ತೆ ಕೊಹ್ಲಿ ಆಟದ ಕುರಿತು ಗುಸುಗುಸು ಪಿಸುಪಿಸು ಮಾತುಗಳು ಕೇಳಿ ಬಂದಿದ್ವು. ಇದೆಲ್ಲಕ್ಕೂ ಆಸ್ಟ್ರೇಲಿಯಾ ವಿರುದ್ಧದ ಸೆಮೀಸ್‌ನಲ್ಲಿ ಉತ್ತರ ಕೊಟ್ಟಿದ್ದಾರೆ. ಆಸ್ಟ್ರೇಲಿಯಾ ನೀಡಿದ್ದ 264 ರನ್‌ಗಳ ಗುರಿ ಬೆನ್ನತ್ತಿದ ಭಾರತ, 43 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಪರದಾಡ್ತಿತ್ತು. ಈ ವೇಳೆ ಚೇಸ್ ಮಾಸ್ಟರ್ ಅದ್ಭುತ ದೃಶ್ಯಕಾವ್ಯವನ್ನ ಬರೆದು ಭಾರತ ಗೆಲುವಿನ ದಡ ಮುಟ್ಟಲು ನೆರವಾದರು. 30 ರನ್‌ಗೆ ಮೊದಲ ವಿಕೆಟ್ ಬಿದ್ದಾಗ ಕ್ರೀಸ್‌ಗೆ ಇಳಿದ ಕೊಹ್ಲಿ, ತಂಡದ ಮೊತ್ತ 225 ರನ್ ಆಗಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಬಿಟ್ಟು ಕೊಟ್ರು. ಇಷ್ಟೊತ್ತಿಗಾಗಲೇ ಭಾರತದ ಗೆಲುವು ಪಕ್ಕಾ ಆಗಿತ್ತು. ಜೊತೆಗೆ ಕಿಂಗ್ ಕೊಹ್ಲಿ 84 ರನ್ ಗಳಿಸಿದರು.
ಒಂದು ಕಾಲವಿತ್ತು.. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಫೀಲ್ಡ್‌ಗೆ ಇಳಿದ್ರೆ ಅಲ್ಲೊಂದು ದಾಖಲೆ ಬರೀತಾರೆ ಅನ್ನೋದು ಪ್ರಚಲಿತದಲ್ಲಿದ್ದ ಕಾಲವದು. ಈಗ ಈ ಮಾತು ವಿರಾಟ್ ಕೊಹ್ಲಿಯ ಕುರಿತು ಕೇಳಿ ಬರ್ತಿದೆ. ಅದ್ರಲ್ಲೂ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಗಳಿಸೋ ಪ್ರತಿಯೊಂದು ರನ್ ಕೂಡ ದಾಖಲೆ ಪುಟ ಸೇರ್ತಿದೆ. ಈಗ ಇಂತಾ ರೆಕಾರ್ಡ್ಸ್ ಲಿಸ್ಟ್‌ಗೆ ಈಗ ಹಲವು ದಾಖಲೆಗಳು ಸೇರ್ಪಡೆಯಾಗಿವೆ. ಐಸಿಸಿ ನಡೆಸೋ ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿ 1 ಸಾವಿರ ಗಳಿಸಿದ ಮೊದಲ ಆಟಗಾರ ಅನ್ನೋ ದಾಖಲೆ ಚೇಸ್ ಮಾಸ್ಟರ್ ಮುಡಿಗೇರಿದೆ. ಅಲ್ಲದೆ, ಐಸಿಸಿ ಟೂರ್ನಿಗಳಲ್ಲಿ ಹೆಚ್ಚು ಅರ್ಧಶತಕಗಳನ್ನ ಗಳಿಸಿದ ದಾಖಲೆಯನ್ನ ಕೊಹ್ಲಿ ಮಾಡಿದ್ದಾರೆ. ತೆಂಡೂಲ್ಕರ್ ಹೆಸರಿನಲ್ಲಿದ್ದ ಈ ದಾಖಲೆಯನ್ನ 24ನೇ ಅರ್ಧ ಶತಕ ಗಳಿಸೋ ಮೂಲಕ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಅನ್ನೋ ದಾಖಲೆ ಶಿಖರ್ ಧವನ್ ಹೆಸರಲ್ಲಿತ್ತು. ಈಗ ವಿರಾಟ್ ಕೊಹ್ಲಿ ಅದನ್ನ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಕ್ರಿಸ್ ಗೇಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿಹೆಚ್ಚು ರನ್ ಗಳಿಸಿರೋ ಆಟಗಾರರಾಗಿದ್ದಾರೆ. ಏಕದಿನ ಪಂದ್ಯಗಳಲ್ಲಿ ಚೇಸ್ ಮಾಡುವಾಗ 8 ಸಾವಿರ ರನ್ ಕಲೆ ಹಾಕಿದ ಎರಡನೇ ಆಟಗಾರ ಅನ್ನೋ ಶ್ರೇಯ ವಿರಾಟ್ ಮುಡಿಗೇರಿದೆ. ತೆಂಡೂಲ್ಕರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಅತಿಹೆಚ್ಚು ಕ್ಯಾಚ್ ಹಿಡಿದವರ ಪಟ್ಟಿಯಲ್ಲಿ ರಿಕ್ಕಿ ಪಾಂಟಿಂಗ್ ಹಿಂದಿಕ್ಕಿ ಎರಡನೆ ಸ್ಥಾನಕ್ಕೇರಿದ್ದಾರೆ. ಮಹೇಲಾ ಜಯವರ್ಧನೆ ಈ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.