ಮುಲ್ಲನ್‌ಪುರ್‌ನ ಎಂವೈಎಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 31ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ 16 ರನ್‌ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನ ನಾಯಕ ಯುಜ್ವೇಂದ್ರ ಚಹಲ್, ತಮ್ಮ ಅದ್ಭುತ ಬೌಲಿಂಗ್ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು.
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, 15.3 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ತಂಡ ಆಲೌಟ್ ಆಯಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ಆರಂಭದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. 7 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ಗೆ 60 ರನ್ ಗಳಿಸಿತು. ಆದರೆ, ಇಲ್ಲಿ ದಾಳಿಗಿಳಿದ ಯುಜ್ವೇಂದ್ರ ಚಹಲ್ ಪಂದ್ಯದ ಗತಿಯನ್ನು ಸಂಪೂರ್ಣವಾಗಿ ತಿರುಗಿಸಿದರು.
8ನೇ ಓವರ್‌ನ 4ನೇ ಎಸೆತದಲ್ಲಿ ಚಹಲ್, ಅಜಿಂಕ್ಯ ರಹಾನೆ (17 ರನ್) ಅವರನ್ನು ಎಲ್‌ಬಿಡಬ್ಲ್ಯೂ ಮಾಡಿ ಮೊದಲ ಯಶಸ್ಸು ಕಂಡರು. ಮುಂದಿನ 9ನೇ ಓವರ್‌ನ ಮೊದಲ ಎಸೆತದಲ್ಲಿಯೇ ಅಂಗ್ಕ್ರಿಶ್ ರಘುವಂಶಿ (37 ರನ್) ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. 12ನೇ ಓವರ್‌ನ 3ನೇ ಎಸೆತದಲ್ಲಿ ರಿಂಕು ಸಿಂಗ್‌ರನ್ನು ಸ್ಟಂಪ್ ಔಟ್ ಮಾಡಿದ ಚಹಲ್, ಮುಂದಿನ ಎಸೆತದಲ್ಲೇ ರಮಣದೀಪ್ ಸಿಂಗ್ (0) ಅವರನ್ನು ಕ್ಯಾಚ್‌ನಲ್ಲಿ ವಾಪಸ್ ಕಳುಹಿಸಿದರು. ಒಟ್ಟಾರೆ, ಚಹಲ್ ತಮ್ಮ 3 ಓವರ್‌ಗಳಲ್ಲಿ ಕೇವಲ 12 ರನ್‌ಗೆ 4 ವಿಕೆಟ್‌ಗಳನ್ನು ಕಿತ್ತು ಪಂದ್ಯವನ್ನು ಪಂಜಾಬ್ ಕಿಂಗ್ಸ್‌ನ ಪಾಳಯಕ್ಕೆ ತಿರುಗಿಸಿದರು.
ಚಹಲ್‌ರ ಈ ಬ್ಯಾಕ್-ಟು-ಬ್ಯಾಕ್ ವಿಕೆಟ್‌ಗಳಿಂದ ಉತ್ಸಾಹಗೊಂಡ ಪಂಜಾಬ್ ಕಿಂಗ್ಸ್ ಆಟಗಾರರು ಕೆಕೆಆರ್ ಮೇಲೆ ಭಾರೀ ಒತ್ತಡ ಹೇರಿದರು. ಅಂತಿಮವಾಗಿ, ಕೊಲ್ಕತ್ತಾ ತಂಡವನ್ನು 15.1 ಓವರ್‌ಗಳಲ್ಲಿ 95 ರನ್‌ಗೆ ಆಲೌಟ್ ಮಾಡಿ, ಪಂಜಾಬ್ ಕಿಂಗ್ಸ್ 16 ರನ್‌ಗಳಿಂದ ಗೆಲುವಿನ ಸಂಭ್ರಮವನ್ನು ಆಚರಿಸಿತು.
ಒಟ್ಟು 4 ಓವರ್‌ಗಳನ್ನು ಎಸೆದ ಯುಜ್ವೇಂದ್ರ ಚಹಲ್, 28 ರನ್‌ಗೆ 4 ವಿಕೆಟ್‌ಗಳನ್ನು ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಚಹಲ್‌ರ ಈ ಅದ್ಭುತ ಪ್ರದರ್ಶನವು ಪಂಜಾಬ್ ಕಿಂಗ್ಸ್‌ನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.