ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ರೇಣುಕಾ ಪೂಜಾರಿಯವರು ಅರೆಕಾಲಿಕ ಕನ್ನಡ ಪ್ರಾಧ್ಯಾಪಕಿಯಾಗಿ ನೇಮಕಗೊಂಡಿದ್ದಾರೆ. ಇದು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವುದು. ಅವರ ಶೈಕ್ಷಣಿಕ ಸಾಧನೆ ಮತ್ತು ಸಮಾಜಕ್ಕೆ ಮಾದರಿಯಾಗುವ ಆಶಯ ಇಲ್ಲಿ ಪ್ರಮುಖವಾಗಿದೆ.
ಕುರುಗೋಡು ತಾಲೂಕಿನ ರೇಣುಕಾ ಪೂಜಾರಿ ಈ ಹುದ್ದೆ ಪಡೆದ ರಾಜ್ಯದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯಾಗಿದ್ದಾರೆ. ವಿಎಸ್ಕೆವಿವಿ ನೇಮಕಾತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ.1ರಷ್ಟು ಮೀಸಲಾತಿ ಅನುಸರಿಸುತ್ತದೆ. ಇದರನ್ವಯ ರೇಣುಕಾ ಪೂಜಾರಿ ಆಯ್ಕೆಯಾಗಿದ್ದಾರೆ.ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಡಿ.10ರಿಂದ ಇವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ರೇಣುಕಾ ಪೂಜಾರಿ ಅವರು ಮೂಲತಃ ಬಳ್ಳಾರಿ ಜಿಲ್ಲೆ ಕುರುಗೋಡು ಪಟ್ಟಣದವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿ, ಪದವಿ ಪೂರ್ವ ಶಿಕ್ಷಣವನ್ನು ಬಳ್ಳಾರಿಯ ಸರ್ಕಾರಿ ಪದವಿ ಪೂರ್ವ (ಮುನ್ಸಿಪಲ್) ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಪದವಿ ಶಿಕ್ಷಣವನ್ನು ಕುರುಗೋಡಿನಲ್ಲಿ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಅಭ್ಯಾಸ ಮಾಡಿದ್ದಾರೆ.
ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ ರೆಗ್ಯುಲರ್ ಆಗಿದ್ದು, ವಿದ್ಯಾರ್ಥಿಯಾಗಿರುವ ವೇಳೆ ದೇಹದಲ್ಲಿ ನೈಸರ್ಗಿಕ ಬದಲಾವಣೆ ಆದ ಹಿನ್ನೆಲೆಯಲ್ಲಿ ಮಂಗಳಮುಖಿಯಾಗಿ ಬದಲಾಗಿದ್ದಾರೆ. ಎಸ್ಎಸ್ ಎಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ.70ರಷ್ಟು ಅಂಕಗಳನ್ನು ಪಡೆದಿದ್ದಾರೆ. ಇವರು, ವಿಶ್ವವಿದ್ಯಾಲಯದ ಪೂರ್ಣಕಾಲಿಕ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಬೇಕು. ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂಬ ಆಸೆ ಹೊತ್ತಿದ್ದಾರೆ.
ರೇಣುಕಾ ಪೂಜಾರಿ ಅವರು ಮಾತನಾಡಿದ್ದು, “ನಮ್ಮದು ಬಡ ಕುಟುಂಬ. ತಂದೆ ಪೂಜಾರಿ ಮಲ್ಲಯ್ಯ, ತಾಯಿ ತಿಪ್ಪಮ್ಮ ಇಬ್ಬರೂ ಅನಕ್ಷರಸ್ಥರು. ಸಮಾಜ ಕೊಂಕು ನುಡಿದರೂ ತಂದೆ, ತಾಯಿ ನನ್ನನ್ನು ದೂರ ತಳ್ಳಲಿಲ್ಲ. ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇನೆ. ಬಹಳಷ್ಟು ಅವಮಾನ ಎದುರಿಸಿದೆ. ಆದರೆ ಹಲವರು ನನಗೆ ನೆರವಾದರು. ಜೋಗತಿ ಸಂಸ್ಕೃತಿ ಮತ್ತು ಚೌಡಿಕೆ ಪದಗಳ ಕುರಿತು ಪಿಎಚ್ಡಿ ಮಾಡುವ ಗುರಿ ಇದೆ” ಎಂದು ಹೇಳಿದರು.
ರೇಣುಕಾ ಅವರು ಯಲ್ಲಮ್ಮನ ದೀಕ್ಷೆ ಪಡೆದು ಜೋಗತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಹೆಸರನ್ನು ರೇಣುಕಾ ಎಂದು ಬದಲಿಸಿಕೊಂಡಿದ್ದಾರೆ. ಮಲ್ಲೇಶ ಕೆ.ಜೋಗತಿ ಇವರ ಮೊದಲ ಹೆಸರಾಗಿತ್ತು.