ಬೆಂಗಳೂರು: ಜಲಾಶಯಗಳು ಭರ್ತಿಯಾಗಿದ್ದು ಮುಂದಿನ ಮುಂಗಾರು ವರೆಗೂ ಜಲವಿದ್ಯುತ್ ಉತ್ಪಾದನೆಗೆ ಸಮಸ್ಯೆ ಇಲ್ಲ ಎಂಬುದರ ನಡುವೆಯೇ ರಾಜ್ಯದ ವಿದ್ಯುತ್ ಸರಬ ರಾಜು ಕಂಪೆನಿ (ಎಸ್ಕಾಂಗಳು ಮುಂದಿನ 3 ವರ್ಷಗಳಿಗೆ ಅಂದಾಜು ಮಾಡಿ ವಿದ್ಯುತ್ ದರ ಏರಿಕೆಗೆ ಕರ್ನಾಟಕ ವಿದ್ಯುತ್ಪತ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ)ಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಈ ಮೂಲಕ ಬಹುವಾರ್ಷಿಕ ದರ ವ್ಯವಸ್ಥೆಗೆ ಅಧಿಸೂಚನೆ ಹೊರಡಿಸಿದ ಅನಂತರದ ಮೊದಲ ಪರಿಷ್ಕರಣೆಯ ಪ್ರಕ್ರಿಯೆ ಕೆಇಆರ್ಸಿ ಚಾಲನೆ ನೀಡಿದಂತಾಗಿದೆ. ಹೊಸ ವ್ಯವಸ್ಥೆಯ ಪ್ರಕಾರ ಎಸ್ಕಾಂಗಳು ಮೊದಲ ವರ್ಷ ಪ್ರತಿ ಯೂನಿಟ್ 65-70 ಪೈಸೆ ಹಾಗೂ 2ನೇ ವರ್ಷ 70-75 ಪೈಸೆ ಮತ್ತು 3ನೇ ವರ್ಷ 85-90 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿವೆ. ಒಂದು ವೇಳೆ ಇದಕ್ಕೆ ಅಸ್ತು ಎಂದರೆ ಗ್ರಾಹಕರಿಗೆ “ಶಾಕ್’ ಖಚಿತ.
ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ನ.30 ಕೊನೆಯ ದಿನವಾಗಿತ್ತು. ಆ ಗಡುವಿನೊಳಗೆ ಎಲ್ಲಾ ಎಸ್ಕಾಂಗಳು ಕೂಡ ದರ ಏರಿಕೆಗೆ ಪ್ರಸ್ತಾವನೆ ಕೊಟ್ಟಿವೆ. ದರ ಏರಿಕೆ ಒಟ್ಟೊಟ್ಟಿಗೆ ಬಹುತೇಕ ಏಕ ಮಾದರಿಯಲ್ಲಿಯೇ ಆಗಲಿದೆ ಎಂದು ಕೆಇಆರ್ಸಿ ಮೂಲಗಳು ತಿಳಿಸಿವೆ.
ಬೆಸ್ಕಾಂ ಪ್ರಸ್ತಾಪ ಏನು?:
ಮುಂದಿನ ಮೂರು ವರ್ಷಗಳ ಕಾಲ ಕ್ರಮವಾಗಿ ಪ್ರತಿ ಯುನಿಟ್ಗೆ 67 ಪೈಸೆ, 75 ಪೈಸೆ ಹಾಗೂ 91 ಪೈಸೆಯಂತೆ ದರ ಹೆಚ್ಚಳ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬೆಸ್ಕಾಂ ಮನವಿ ಸಲ್ಲಿಸಿದೆ. ತನ್ನ ದರ ಪರಿಷ್ಕರಣೆಯ ಮನವಿ ಪ್ರಸ್ತಾವನೆಯಲ್ಲಿ ಮುಂದಿನ ವರ್ಷದಲ್ಲಿ (2025-26) ಬೆಸ್ಕಾಂಗೆ 2,572.69 ಕೋಟಿ ರು.ಗಳಷ್ಟು ಆದಾಯ ಕೊರತೆ ಉಂಟಾಗಲಿದೆ. ಇದನ್ನು ನೀಗಿಸಲು 2025ರ ಏ.1ರಿಂದ ಅನ್ವಯವಾಗುವಂತೆ 2025-26ರ ಸಾಲಿಗೆ ಪ್ರತಿ ಯುನಿಟ್ಗೆ 67 ಪೈಸೆಯಂತೆ ದರ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದೆ.
ಇನ್ನು 2026-27ನೇ ಆರ್ಥಿಕ ವರ್ಷದಲ್ಲಿ 3,018.95 ಕೋಟಿ ರು. ಆದಾಯ ಕೊರತೆ ಉಂಟಾಗಲಿದೆ. ಹೀಗಾಗಿ 2026-27ನೇ ಸಾಲಿಗೆ ಪ್ರತಿ ಯುನಿಟ್ ಗೆ 75 ಪೈಸೆ ದರ ಹೆಚ್ಚಳ ಮಾಡಬೇಕು. 2027-28ರಲ್ಲಿ 3,882.69 ಕೊರತೆ ಉಂಟಾಗಲಿದ್ದು, ಪ್ರತಿ ಯುನಿಟ್ಗೆ 91 ಪೈಸೆ ಪರಿಷ್ಕರಣೆ ಮಾಡಬೇಕು ಎಂದು ಬೆಸ್ಕಾಂ ಕೋರಿದೆ.
ಎಚ್ಟಿ ಗ್ರಾಹಕರಿಗೆ ನಿಗದಿತ ಶುಲ್ಕವನ್ನೂ ಪರಿಷ್ಕರಣೆ ಮಾಡಬೇಕು ಎಂಬುದು ಸೇರಿ ಹಲವು ಅಂಶಗಳನ್ನು ಪ್ರಸ್ತಾವನೆಯಲ್ಲಿ ಸಲ್ಲಿಕೆ ಮಾಡಿದೆ. ಬೆಸ್ಕಾಂ ಸೇರಿ ಎಲ್ಲಾ ಎಸ್ಕಾಂಗಳು ದರ ಏರಿಕೆ ಬಗ್ಗೆ ಪ್ರಸ್ತಾವನೆ ಮಾತ್ರ ಸಲ್ಲಿಸಿವೆ. ಈ ಬಗ್ಗೆ ಕೆಇಆರ್ಸಿಯು ಸಾರ್ವಜನಿಕರು, ಉದ್ಯಮಿಗಳು, ವ್ಯಾಪಾರಸ್ಥರು ಸೇರಿ ಎಲ್ಲಾ ವರ್ಗದವರಿಂದ ಅಹವಾಲು ಸ್ವೀಕರಿಸುತ್ತದೆ. ಬಳಿಕ ಅಂತಿಮವಾಗಿ ದರ ಹೆಚ್ಚಳದ ಅಂತಿಮ ಆದೇಶ ಹೊರಡಿಸುತ್ತದೆ. ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಈ ಆದೇಶ ಹೊರ ಬೀಳಲಿದ್ದು, 2025ರ ಏ.1ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ.
ಮೊಬೈಲ್ ರಿಚಾರ್ಜ್ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್ ಪ್ಲಾನ್; ನೀವು ಹಣ ಕಟ್ಟಿದಷ್ಟೇ ಕರೆಂಟ್ ಸಪ್ಲೈ!
ಬೆಂಗಳೂರಿನಲ್ಲಿ ಇನ್ನುಮುಂದೆ ಮೊಬೈಲ್ ರೀಚಾರ್ಜ್ ಮಾದರಿಯಲ್ಲಿಯೇ ಅಡ್ವಾನ್ಸ್ ಆಗಿಯೇ ಬೆಸ್ಕಾಂ ರೀಚಾರ್ಜ್ ಮಾಡಿಸಿಕೊಂಡು ವಿದ್ಯುತ್ ಅನ್ನು ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ನೀವು ರೀಚಾರ್ಜ್ ಮಾಡಿದ ಹಣದ ಮೌಲ್ಯದಷ್ಟು ವಿದ್ಯುತ್ ಪೂರೈಕೆಯಾದ ನಂತರ ತಂತಾನೆ ಸ್ಥಗಿತಗೊಳ್ಳುತ್ತದೆ. ಆಗ ಪುನಃ ರೀಚಾರ್ಜ್ ಮಾಡಿ ವಿದ್ಯುತ್ ಪೂರೈಕೆಯನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲು ಬೆಸ್ಕಾಂ ಮುಂದಾಗಿದೆ.
ಕೈಗಾರಿಕೆಗಳಿಂದ ತೀವ್ರ ಆಕ್ಷೇಪ
ಬಹುವಾರ್ಷಿಕ ದರ ಪದ್ಧತಿಗೆ ಕೈಗಾರಿಕೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಹೀಗೆ 3 ವರ್ಷಗಳ ವಿದ್ಯುತ್ ದರ ಪರಿಷ್ಕರಣೆಯನ್ನು ಮುಂಚಿತವಾಗಿಯೇ ಮಾಡುವುದು ವೈಜ್ಞಾನಿಕ ಕ್ರಮವಲ್ಲ. ಇದರಿಂದ ಹೊರೆಯೂ ಆಗಲಿದೆ. ಅಷ್ಟಕ್ಕೂ ದೇಶದ ಇತರ ರಾಜ್ಯಗಳು ಇನ್ನೂ ಈ ನಿಟ್ಟಿನಲ್ಲಿ ಕಾದುನೋಡುವ ತಂತ್ರ ಅನುಸರಿಸುತ್ತಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಇದನ್ನು ಅಳವಡಿಸಿಕೊಳ್ಳುತ್ತಿರುವುದು ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ಪೂರಕ ಕ್ರಮವಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಅಪಸ್ವರಗಳ ಮಧ್ಯೆಯೇ ಪರಿಷ್ಕರಣೆಗೆ ಸಿದ್ಧತೆಗಳು ನಡೆದಿವೆ.
“ಬಹುವಾರ್ಷಿಕ ದರ ಪದ್ಧತಿಯು ಈಗಿರುವ ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ಶುಲ್ಕದ (ಎಪ್ಪಿಪಿಸಿಎ) ಮುಂದುವರಿದ ಭಾಗವಾಗಿದೆ. ಎಪ್ಪಿಪಿಸಿಎಯಲ್ಲಿ ಆಯಾ ಎಸ್ಕಾಂಗಳಿಗೆ ಪ್ರತೀ ತಿಂಗಳು ಪರಿಷ್ಕರಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಎಂವೈಟಿ ಅಡಿ ಒಮ್ಮೆ ಪರಿಷ್ಕರಣೆಗೆ ಅನುಮೋದನೆ ನೀಡಿದರೆ ಮುಂದಿನ 3 ವರ್ಷಗಳ ಕಾಲ ಮತ್ತೆ ಯಾವುದೇ ರೀತಿಯ ದರ ಪರಿಷ್ಕರಣೆ ಮಾಡುವುದಿಲ್ಲ. ಹೆಚ್ಚೆಂದರೆ ವಾರ್ಷಿಕ ಕಾರ್ಯಸಾಧನೆ ಪರಿಶೀಲನೆಯಲ್ಲಿ (ಎಪಿಆರ್) ಕಂಡುಬರುವ ವ್ಯತ್ಯಾಸಗಳನ್ನು ಸರಿದೂಗಿಸಲು ನಾಲೈದು ಪೈಸೆ ಹೆಚ್ಚು-ಕಡಿಮೆ ಆಗುತ್ತದೆ ಅಷ್ಟೇ’ ಎಂದು ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಗ್ರಾಹಕರಿಗೆ ಹೊರೆ
ಸರಕಾರದ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ವಿದ್ಯುತ್ ಯೋಜನೆ “ಗೃಹಜ್ಯೋತಿ’ ಇರುವುದರಿಂದ ಒಂದು ವೇಳೆ ದರ ಏರಿಕೆಯಾದರೂ ಅದರ ಬಿಸಿ ಗೃಹ ಬಳಕೆದಾರರಿಗೆ ನೇರವಾಗಿ ತಟ್ಟದಿರಬಹುದು. ಆದರೆ ತೆರಿಗೆ ಸೇರಿ ಬೇರೆ ಬೇರೆ ರೂಪದಲ್ಲಿ ಪರೋಕ್ಷವಾಗಿ ಇದರ ಬಿಸಿ ತಟ್ಟಲಿದೆ. ಅಂದರೆ ಸರಕಾರ ಸಂಪನ್ಮೂಲ ಸಂಗ್ರಹಿಸಿ ಭರಿಸಬೇಕಾಗುತ್ತದೆ. ಒಂದು ವೇಳೆ ವಿದ್ಯುತ್ ಬಳಕೆಗಿಂತ ನಿಗದಿತ ಶುಲ್ಕ ಹೆಚ್ಚಳ ಮಾಡಿದಾಗ ಅದನ್ನು ಗ್ರಾಹಕರೇ ಪಾವತಿಸಬೇಕಾಗುತ್ತದೆ.