‘ಬಿಗ್ ಬಾಸ್’ ಕನ್ನಡ ಸೀಸನ್ 11ರ ಶೋಗೆ ಅದ್ಯಾಕೋ ಅವಾಚ್ಯ ಶಬ್ದಗಳ ನಂಟು ಜೋರಾಗಿಯೇ ಇರುವಂತಿದೆ. ಆರಂಭದಲ್ಲಿ ಎಲ್ಲರ ಗಮನಸೆಳೆದಿದ್ದ ‘ವಕೀಲ್ ಸಾಬ್’ ಜಗದೀಶ್ ಅವರು ಮನೆಯಲ್ಲಿರುವ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡಿದ್ದರು. ಆನಂತರ ಅವರು ಶೋನಿಂದಲೇ ಎಲಿಮಿನೇಟ್ ಆಗಬೇಕಾಯಿತು. ಇದೀಗ ಮತ್ತೊಮ್ಮೆ ಆ ರೀತಿಯ ವರ್ತನೆಯನ್ನು ರಜತ್ ಕಿಶನ್ ತೋರಿದ್ದಾರೆ. ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಸ್ಪರ್ಧಿ ರಜತ್ ಬಾಯಲ್ಲೂ ಅವಾಚ್ಯ ಶಬ್ದಗಳು ಬಂದಿದ್ದು, ಅದಕ್ಕೂ ಬೀಪ್ ಹಾಕಲಾಗಿದೆ. ಬಹಳ ದಿನಗಳ ಬಳಿಕ ಪುನಃ ಬಿಗ ಬಾಸ್ ಮನೆಯಲ್ಲಿ ಬೀಪ್ ಸೌಂಡ್ ಕೇಳಿಬಂದಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ನೀಲಿ ಮತ್ತು ಕೆಂಪು ಎಂಬ ಎರಡು ಟೀಮ್ಗಳಿವೆ. ಭವ್ಯಾ ಗೌಡ ಅವರ ನೀಲಿ ಟೀಮ್ನಲ್ಲಿ ಗೋಲ್ಡ್ ಸುರೇಶ್, ಶಿಶಿರ್, ಧರ್ಮ, ತ್ರಿವಿಕ್ರಮ್, ಮೋಕ್ಷಿತಾ, ಐಶ್ವರ್ಯಾ ಇದ್ದಾರೆ. ಇನ್ನು, ಶೋಭಾ ಶೆಟ್ಟಿ ನಾಯಕತ್ವದ ಕೆಂಪು ತಂಡದಲ್ಲಿ ಧನರಾಜ್ ಆಚಾರ್, ಹನುಮಂತ, ಗೌತಮಿ, ಮಂಜು, ಚೈತ್ರಾ ಕುಂದಾಪುರ ಮತ್ತು ರಜತ್ ಇದ್ದಾರೆ. ಈ ತಂಡಗಳಿಗೆ ಒಂದು ಗೇಮ್ ನೀಡಲಾಗಿತ್ತು. ಗಾರ್ಡನ್ ಏರಿಯಾದಲ್ಲಿ ನಡೆಯುತ್ತಿದ್ದ ಈ ಗೇಮ್ನಲ್ಲಿ ಕೆಂಪು ತಂಡದಿಂದ ಮಂಜು, ರಜತ್ ಆಡಿದರೆ, ನೀಲಿ ಟೀಮ್ನಿಂದ ತ್ರಿವಿಕ್ರಮ್ ಮತ್ತು ಸುರೇಶ್ ಆಡುತ್ತಿದ್ದರು. ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಇರುವ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ‘ಬಿಗ್ ಬಾಸ್’ ಆಟದ ನಿಯಮದಲ್ಲಿತ್ತು.
ಈ ವೇಳೆ ಸುರೇಶ್ ಮತ್ತು ರಜತ್ ಮಧ್ಯೆ ಮಾತಿನ ಚಕಮಕಿ ಆರಂಭವಾಯಿತು. ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್ಗೆ ಅವಮಾನಿಸಿದ್ದಾರೆ. ಜೋರು ಧ್ವನಿಯಲ್ಲೇ ಗಲಾಟೆ ಆರಂಭಿಸಿದ ರಜತ್, ಏಕವಚನದಲ್ಲಿ ಬೈಯ್ಯಲು ಶುರುಮಾಡಿದರು. ಏಕಾಏಕಿ ಒಂದಷ್ಟು ಅವಾಚ್ಯ ಶಬ್ದಗಳನ್ನು ರಜತ್ ಬಳಸಿದರು. ಆಗ ಬಿಗ್ ಬಾಸ್ ಆ ಮಾತಿಗೆ ಬೀಪ್ ಹಾಕಿದರು. ಯಾವಾಗ ತಮ್ಮ ಬಗ್ಗೆ ಅವಾಚ್ಯ ಶಬ್ದಗಳನ್ನು ರಜತ್ ಬಳಸಿದರೋ, ಗೋಲ್ಡ್ ಸುರೇಶ್ ಕೆರಳಿದರು. ಬಿಗ್ ಬಾಸ್ ನಾನು ಆಟ ಆಡಲ್ಲ. ಬಾಗಿಲು ತೆಗಿಯಿರಿ ಬಿಗ್ ಬಾಸ್. ನಮ್ಮಪ್ಪನೇ ನನಗೆ ಒಂದು ಮಾತು ಹೇಳಿಲ್ಲ, ಇವ್ನ್ ಯಾವನೂ ನನಗೆ ಹೀಗೆಲ್ಲಾ ಹೇಳೋಕೆ..” ಎಂದು ಸುರೇಶ್ ರೊಚ್ಚಿಗೆದ್ದರು. “ಬಿಗ್ ಬಾಸ್, ಬಾಗಿಲು ತೆಗೆಯಿರಿ, ನಾನು ಇಲ್ಲಿಂದ ಹೋಗ್ತಿನಿ, ನನಗೆ ಇಲ್ಲಿರೋಕೆ ಇಷ್ಟವಿಲ್ಲವೆಂದು ಸುರೇಶ್ ಮಾತ್ರ ತುಂಬ ಬೇಸರ ಮಾಡಿಕೊಂಡಿದ್ದಾರೆ. ಇಂದಿನ ಎಪಿಸೋಡ್ನಲ್ಲಿ ಸುರೇಶ್ ಮನೇಲಿ ಇರ್ತಾರಾ ಇಲ್ಲವಾ ಕಾದುನೋಡಬೇಕಿದೆ.