- ಕಲ್ಪತರು ನಾಡಿನಲ್ಲಿ ಮಗು/ಮಕ್ಕಳ ಮಾರಾಟ ಜಾಲ
- ತುಮಕೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ
- ದಂಧೆಕೋರ ಗ್ಯಾಂಗ್ ವಶಕ್ಕೆ ಪಡೆದ ಪೊಲೀಸರು
- ಮಾರಾಟವಾದ 9 ಶಿಶುಗಳಲ್ಲಿ, ಐದು ಮಗುವಿನ ರಕ್ಷಣೆ
ಕಲ್ಪತರುನಾಡು ತುಮಕೂರಿನಲ್ಲಿ ಮಗು ಮಾರಾಟದ ಜಾಲ ಎಗ್ಗಿಲ್ಲದೆ ನಡೆಯುತ್ತಿದೆ. ಅವಿವಾಹಿತರೇ ಈ ಖತರ್ನಾಕ್ ಗ್ಯಾಂಗ್ನ ಟಾರ್ಗೆಟ್ ಆಗಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ. ಈ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ತುಮಕೂರು ಪೊಲೀಸರು, ಮಕ್ಕಳ ಮಾರಾಟ ಗ್ಯಾಂಗ್ನ ಏಳು ಮಂದಿಯನ್ನ ಬಂಧಿಸಿದ್ದಾರೆ. ಬಂಧಿಸಲ್ಪಟ್ಟ ಏಳು ಜನರಲ್ಲಿ ನರ್ಸಿಂಗ್ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರು, ನರ್ಸ್, ಟ್ಯಾಟೂ ಆರ್ಟಿಸ್ಟ್ ಮತ್ತು ಆಟೋರಿಕ್ಷಾ ಚಾಲಕರು ಸೇರಿದ್ದಾರೆ. ಗ್ಯಾಂಗ್ ಮಕ್ಕಳಿಲ್ಲದ ದಂಪತಿಗಳನ್ನು ಮತ್ತು ಅವಿವಾಹಿತ ತಾಯಂದಿರು ಅಥವಾ ವಿವಾಹೇತರ ಸಂಬಂಧಗಳ ನಂತರ ಗರ್ಭಿಣಿಯಾದ ಮಹಿಳೆಯರನ್ನು ಗುರಿಯಾಗಿಸುತ್ತಿತ್ತು. ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ದು, ಮಕ್ಕಳು ಜನಿಸಿದ ನಂತರ ನಕಲಿ ಜನನ ಪ್ರಮಾಣ ಪತ್ರವನ್ನು ಸೃಷ್ಟಿಸಿ ನಂತರ ಮಾರಾಟ ಮಾಡುತ್ತಿದ್ದರು.
ತುಮಕೂರಿನ ನರ್ಸಿಂಗ್ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಯು.ಡಿ.ಮಹೇಶ್, ಮೆಹಬೂಬ್ ಷರೀಫ, ತುಮಕೂರು ಜಿಲ್ಲೆಯ ಗೂಬೆಹಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (PHC) ಫಾರ್ಮಾಸಿಸ್ಟ್, ದೊಡ್ಡೇರಿಯ ಸರ್ಕಾರಿ ಪಿಎಚ್ಸಿಯಲ್ಲಿ ನರ್ಸ್ ಪೂರ್ಣಿಮಾ, ಶಿರಾ ಸರಕಾರಿ ಆಸ್ಪತ್ರೆಯ ನರ್ಸ್ ಸೌಜನ್ಯ, ಟ್ಯಾಟೂ ಕಲಾವಿದ ಕೆ.ಎನ್.ರಾಮಕೃಷ್ಣಪ್ಪ, ತುಮಕೂರು ನಗರ ನಿವಾಸಿ ಹನುಮತ್ತರಾಜು, ಮತ್ತು ಮಗುವನ್ನು ಖರೀದಿಸಿದ ಆಟೋರಿಕ್ಷಾ ಚಾಲಕ ಮುಬಾರಕ್ ಪಾಷಾ ಬಂಧಿತ ಆರೋಪಿಗಳಾಗಿದ್ದಾರೆ.
ಈ ತಂಡವು ನವಜಾತ ಶಿಶುಗಳನ್ನು ಸುಮಾರು 2 ರಿಂದ 3 ಲಕ್ಷ ರೂ.ಗೆ ಮಾರಾಟ ಮಾಡಿದೆ ಮತ್ತು ಮಾರಾಟವಾದ ಒಂಬತ್ತು ಶಿಶುಗಳಲ್ಲಿ ಐವರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.