ಇತ್ತೀಚೆಗೆ ನಡೆದ ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರರಂಗದ ಕಲಾವಿದರು ಬಂದಿಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದರು. ಅವರ ಆ ಅಸಮಾಧಾನದ ಮಾತು ಅದೇ ವೇದಿಕೆಯಲ್ಲಿ ಹೊರಬಂದಿದ್ದಲ್ಲದೆ, ಚಿತ್ರರಂಗದವರ ನಟ್ಟು- ಬೋಲ್ಟ್ ನ ಯಾವಾಗ ಎಲ್ಲಿ ಹೇಗೆ ಟೈಟ್ ಮಾಡ್ಬೇಕು ಅನ್ನೋದು ಗೊತ್ತಿದೆ ಅಂತಲೂ ಖಾರವಾಗಿ ಮಾತನಾಡಿದ್ರು.
ಅದಾದ ಬಳಿಕ ಆಗ್ತಿರೋ ಪರ- ವಿರೋಧಗಳ ಬೆಳವಣಿಗೆಗಳು ಗೊತ್ತೇಯಿದೆ. ಒಟ್ನಲ್ಲಿ ಚಿತ್ರರಂಗಕ್ಕೆ ಸರ್ಕಾರದಿಂದ ಸಂಕಷ್ಟ ಕಟ್ಟಿಟ್ಟ ಬುತ್ತಿ ಅಂತ ಒಂದಷ್ಟು ಮಂದಿ ಮಾತಾಡ್ತಿದ್ರು. ಅದೀಗ ನಿಜ ಆಗ್ತಿದೆ.
ಯೆಸ್.. ತುಮಕೂರಿನ ಬಳಿ ನಡೆಯುತ್ತಿದ್ದ ಸ್ಟಾರ್ ಡೈರೆಕ್ಟರ್ ಒಬ್ಬರ ಸಿನಿಮಾವೊಂದಕ್ಕೆ ಸಂಕಷ್ಟ ಶುರುವಾಗಿದೆ. ರಾಬರ್ಟ್, ಕಾಟೇರ ಚಿತ್ರಗಳ ನಿರ್ದೇಶಕ ತರುಣ್ ಸುಧೀರ್ ತಮ್ಮ ತರುಣ್ ಸುಧೀರ್ ಕ್ರಿಯೇಟಿವ್ಸ್ ಅನ್ನೋ ಹೋಮ್ ಬ್ಯಾನರ್ ನಲ್ಲಿ ಇನ್ನೂ ಹೆಸರಿಡದ ಪ್ರೊಡಕ್ಷನ್ ನಂ.2 ಸಿನಿಮಾನ ನಿರ್ಮಾಣ ಮಾಡ್ತಿದ್ದಾರೆ.
ಅದಕ್ಕೆ ಪುನೀತ್ ಆರ್ಯ ಆ್ಯಕ್ಷನ್ ಕಟ್ ಹೇಳ್ತಿದ್ದು, ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ಮಹಾನಟಿ ವಿನ್ನರ್ ಪ್ರಿಯಾಂಕಾ ನಾಯಕ-ನಾಯಕಿಯಾಗಿ ನಟಿಸ್ತಿದ್ದಾರೆ. ಇವರ ಸಿನಿಮಾದ ಶೂಟಿಂಗ್ ತಮಕೂರು ತಾಲ್ಲೂಕಿನ ನಾಮದ ಚಿಲುಮೆ ಬಳಿ ನಡೆಯುತ್ತಿದ್ದಾಗ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡ ದಾಳಿ ನಡೆಸಿದೆ. ದಾಳಿ ವೇಳೆ ಊಟದ ಸಾಮಗ್ರಿ, ಲೈಟ್ಸ್, ಟಿಟಿ ವಾಹನವನ್ನು ವಶಕ್ಕೆ ಪಡೆದಿದೆ.
ನಿನ್ನೆ ತಡರಾತ್ರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರಾ ಟೀಂ ದಾಳಿ ನಡೆಸಿದ್ದು, ಐದು ದಿನಗಳಿಂದ ಅನುಮತಿ ಪಡೆಯದೇನೇ ಶೂಟಿಂಗ್ ನಡೆಸಿದ್ದೀರಿ ಅಂತ ಚಿತ್ರತಂಡದ ಮೇಲೆ ಆರೋಪಿಸಿದ್ದಾರೆ. ಅನುಮತಿ ಇಲ್ಲದೆ ರಾತ್ರಿ ವೇಳೆ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದಾರೆ ಅನ್ನೋದು ಅರಣ್ಯಾಧಿಕಾರಿಗಳ ಆರೋಪ. ಆದ್ರೆ ಗ್ಯಾರಂಟಿ ನ್ಯೂಸ್ ಗೆ ಪ್ರತಿಕ್ರಿಯಿಸಿರೋ ನಿರ್ದೇಶಕ ಪುನೀತ್ ಆರ್ಯ, ನಾವು ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಸೇ ಇಲ್ಲ. ದೇವಸ್ಥಾನದಲ್ಲಿ ನಡೆಸಿದ್ದು, ಸುಸೂತ್ರವಾಗಿ ಮುಗಿಸಿದ್ದೇವೆ ಅಂತಾರೆ.
ತರುಣ್ ಸುಧೀರ್ ಕ್ರಿಯೇಟಿವ್ ಬ್ಯಾನರ್ ನಿಂದ ಈ ಹಿಂದೆ ಶೂಟಿಂಗ್ ಗಾಗಿ ಅನುಮತಿ ಕೋರಿ ಪತ್ರ ಕೂಡ ಬರೆಯಲಾಗಿತ್ತಂತೆ. ಕಾರ್ಯಕಾರಿ ನಿರ್ಮಾಪಕ ಸೂರಜ್ ಕುಮಾರ್, ಫೆ-13,14 & 15ರಂದು 3 ದಿನಗಳ ಕಾಲ ಚಿತ್ರೀಕರಣಕ್ಕೆ ಅನುಮತಿ ಕೋರಿ ವಾರ್ತಾ & ಸಾರ್ವಜನಿಕ ಸಂಪರ್ಕ ಇಲಾಖೆಗೆ ಪತ್ರ ಕೂಡ ಬರೆದಿದ್ದರಂತೆ.
ಆದ್ರೆ ಅರಣ್ಯವಲ್ಲದ ಪ್ರದೇಶದಲ್ಲಿ ಚಿತ್ರೀಕರಣಕ್ಕೂ ಸರ್ಕಾರ ಹೀಗೆ ಅಡ್ಡಿಪಡಿಸ್ತಿರೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಹಲವರ ಪ್ರಶ್ನೆಯಾಗಿದೆ. ಈ ಅಂತೆ ಕಂತೆಗಳಿಗೆ ಖುದ್ದು ನಿರ್ಮಾಪಕ ತರುಣ್ ಸುಧೀರ್ ಅಥ್ವಾ ಡೈರೆಕ್ಟರ್ ಪುನೀತ್ ಆರ್ಯ ಹೇಳಿಕೆ ನೀಡುವ ಮೂಲಕ, ಸ್ಪಷ್ಟನೆ ನೀಡಿದ್ರೆ ಒಳ್ಳೆಯದು.