ನರೇಂದ್ರ ದಾಮೋದರ್ ದಾಸ್ ಮೋದಿ. ಹ್ಯಾಟ್ರಿಕ್ ಸಾಧಿಸಿ ಪ್ರಧಾನಿಯಾಗಿರುವ ಮೋದಿ, ಈಗ ಮತ್ತೊಂದು ಇತಿಹಾಸ ಸೃಷ್ಟಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಪ್ರಧಾನಿ ಮೋದಿ, ಈ ತಿಂಗಳ ಕೊನೆಯಲ್ಲಿ ಯುಗಾದಿಯ ದಿನ, ಮಾರ್ಚ್ 30ನೇ ತಾರೀಕು, ಮೋದಿ ಆರ್ ಎಸ್ ಎಸ್ ಕೇಂದ್ರ ಕಚೇರಿಯಾದ ನಾಗ್ಪುರಕ್ಕೆ ಭೇಟಿ ಕೊಡಲಿದ್ದಾರೆ. ಯುಗಾದಿ, ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಮೊದಲ ದಿನ. ಆ ದಿನ ಆರ್ ಎಸ್ ಎಸ್ ನಾಗ್ಪುರದಲ್ಲಿ ಮಹಾದೇವ್ ಕಣ್ಣಿನ ಆಸ್ಪತ್ರೆ ಶಂಕುಸ್ಥಾಪನೆ ನೆರವೇರಲಿದೆ. ಆ ಕಾರ್ಯಕ್ರಮದಲ್ಲಿ ಮೋದಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಇದರಲ್ಲೇನಿದೆ ಹೊಸ ಇತಿಹಾಸ, ಮೋದಿ ತಾವು ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ತಾರೆ. ಇತ್ತೀಚೆಗೆ ಲೆಕ್ಸ್ ಫ್ರೀಡ್ಮನ್ ಪಾಡ್ಕಾಸ್ಟ್ನಲ್ಲಿಯೂ ಕೂಡಾ ಸ್ವಯಂ ಸೇವಕ ಸಂಘವನ್ನು ಹೊಗಳಿದ್ದಾರೆ. ನನ್ನ ವ್ಯಕ್ತಿತ್ವವನ್ನು ರೂಪಿಸಿದ್ಧೇ ಆರ್ ಎಸ್ ಎಸ್ ಎಂದು ಹೆಮ್ಮೆಯಿಂದ ಹೇಳಿಕೊಳ್ತಾರೆ. ಅಂತಹವರು ನಾಗ್ಪುರದ ಆರ್ ಎಸ್ ಎಸ್ ಕಚೇರಿಗೆ ಭೇಟಿ ನೀಡುವುದು, ಆರ್ ಎಸ್ ಎಸ್ ಮುಖ್ಯಸ್ಥರ ಜೊತೆ ವೇದಿಕೆ ಹಂಚಿಕೊಳ್ಳುವುದರಲ್ಲಿ ವಿಶೇಷ ಏನಿದೆ ಎನ್ನುವಂತಿಲ್ಲ. ಆರ್ ಎಸ್ ಎಸ್ ಮುಖ್ಯಸ್ಥರ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವ, ಆರ್ ಎಸ್ ಎಸ್ ಕಚೇರಿಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಮಂತ್ರಿ, ನರೇಂದ್ರ ಮೋದಿ. ಈ ಹಿಂದೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಆರ್ ಎಸ್ ಎಸ್ ಸಮಾವೇಶಕ್ಕೆ ಅತಿಥಿಯಾಗಿ ಹೋಗಿದ್ದರು. ಅದು ವಿವಾದವಾಗಿತ್ತು. ಈಗ ಹಾಲಿ ಪ್ರಧಾನಿಯೇ ಹೋಗುತ್ತಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಪ್ರಧಾನಿ ಬಂದು ಹೋಗುವ ದಿನ ಹತ್ತಿರವಾಗುತ್ತಿದ್ದಂತೆಯೇ ನಾಗ್ಪುರ ಪ್ರಕ್ಷುಬ್ಧಗೊಂಡಿದೆ. ಇದು ಮೋದಿ ಭೇಟಿಯನ್ನು ತಡೆಯುವ ಸಂಚಿರಬಹುದಾ ಎನ್ನುವುದು ಒಂದು ಅನುಮಾನ. ನಾಗ್ಪುರದಲ್ಲೀಗ ವಾತಾವರಣ ಸರಿ ಇಲ್ಲ. ನಾಗ್ಪುರ ಧಗಧಗಿಸುತ್ತಿದೆ. ಅದಕ್ಕೆ ಕಾರಣ ಏನೆಂದು ಹುಡುಕಿದರೆ ಸಿಗುವ ಉತ್ತರ ಔರಂಗಜೇಬ್.
ಇತ್ತೀಚೆಗೆ ತಾನೇ ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಛಾವಾ ಸಿನಿಮಾ, ಛತ್ರಪತಿ ಶಿವಾಜಿ ಮಹಾರಾಜರ ಮಗ ಸಂಭಾಜಿಯ ಮೇಲೆ ಔರಂಗಜೇಬನ ಕ್ರೌರ್ಯವನ್ನು ಬಿಚ್ಚಿಟ್ಟಿತ್ತು. ಸತತ 40 ದಿನಗಳ ಕಾಲ, ಸಂಭಾಜಿಯ ಚರ್ಮವನ್ನು ಸುಲಿದು.. ಆ ಜಾಗಕ್ಕೆ ಉಪ್ಪು ಸುರಿದು, ಕಣ್ಣನ್ನು ಕಿತ್ತು, ಉಗುರುಗಳನ್ನು ಕೀಳಿಸಿ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿತ್ತು. ಅದೇ ಸಂಭಾಜಿ ನಗರದಲ್ಲಿ ಔರಂಗಜೇಬನ ಸಮಾಧಿಯೂ ಇದೆ. ಆ ಸಮಾಧಿಯನ್ನು ತೆಗೆಯಿರಿ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಆ ಪ್ರತಿಭಟನೆ ವೇಳೆ ಧರ್ಮಗ್ರಂಥವೊಂದನ್ನು ಸುಟ್ಟು ಹಾಕಿದ್ದಾರೆ ಎಂದು ಹಬ್ಬದ ವದಂತಿಗೆ ನಾಗ್ಪುರ ಹೊತ್ತಿ ಉರಿದಿದೆ. ಕಲ್ಲು ತೂರಾಟವಾಗಿದೆ. ಹಲವು ವಾಹನಗಳು ಸುಟ್ಟು ಭಸ್ಮವಾಗಿವೆ. ಆಶ್ರುವಾಯು ಪ್ರಯೋಗವೂ ಆಗಿದೆ.
ಮೇಲ್ನೋಟಕ್ಕೆ ಇದು ಸಂಭಾಜಿ, ಔರಂಗಜೇಬ್ ಸಮಾಧಿ, ಧರ್ಮಗ್ರಂಥ ಸುಡಲಾಗಿದೆ ಎಂಬ ವದಂತಿಯಿಂದ ಹಬ್ಬಿದ ಗಲಾಟೆ ಎನ್ನಲಾಗ್ತಿದ್ದರೂ, ಪ್ರಧಾನಿ ಮೋದಿ ಆರ್ ಎಸ್ ಎಸ್ ಕಚೇರಿ ಭೇಟಿ ಹತ್ತಿರವಾಗುತ್ತಿರುವ ದಿನಗಳಲ್ಲೇ ಪ್ರತಭಟನೆ ಹಿಂಸಾರೂಪಕ್ಕೆ ತಿರುಗಿರುವುದು ಬೇರೆಯದೇ ತಿರುವು ಪಡೆಯುತ್ತಿದೆ. ಆರ್ ಎಸ್ ಎಸ್ ಕಚೇರಿಗೆ, ದೇಶದ ಪ್ರಧಾನಮಂತ್ರಿ ಭೇಟಿ ಕೊಡುವುದನ್ನು ತಪ್ಪಿಸಲೆಂದೇ ಇಂತಹ ಹಿಂಸಾಕೃತ್ಯಗಳು ನಡೆಯುತ್ತಿವೆಯೇ ಎಂಬ ಅನುಮಾನಕ್ಕೂ ಕಾರಣವಾಗಿದೆ. ಸದ್ಯಕ್ಕೆ ನಾಗ್ಪುರ, ಸಂಭಾಜಿನಗರ ಶಾಂತವಾಗಿರುವಂತೆ ತೋರುತ್ತಿದೆ. ಆದರೆ ಬೂದಿ ಮುಚ್ಚಿದ ಕೆಂಡದಂತೆಯೇ ಕಾಣುತ್ತಿದೆ.