ಚಾಮರಾಜನಗರ ಸಂಸದ, ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸ ಪ್ರಸಾದ್ ನಿಧನರಾಗಿದ್ದಾರೆ. ಮಧ್ಯರಾತ್ರಿ ತೀವ್ರ ಹೃದಯಾಘಾತದಿಂದ ತಡರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರು ಮೂರು ದಿನಗಳ ಹಿಂದೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ. ವೈದ್ಯರು ಚಿಕಿತ್ಸೆ ನೀಡಿದರು ಯಾವುದೇ ಫಲನೀಡಲಿಲ್ಲ. ಶ್ರೀನಿವಾಸ್ ಪ್ರಸಾದ್ ಅವರು ಪತ್ನಿ ಭಾಗ್ಯಲಕ್ಷ್ಮಿ ಪ್ರಸಾದ್, ಪುತ್ರಿಯರಾದ ಪ್ರತಿಮಾ ಪ್ರಸಾದ್, ಪೂರ್ಣಿಮಾ ಪ್ರಸಾದ್, ಪೂನಂ ಪ್ರಸಾದ್ ಅಗಲಿದ್ದಾರೆ. ಇತ್ತೀಚೆಗೆ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರು. ಮೈಸೂರು, ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡರಾಗಿದ್ದರು. ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದರು. ಮೂಲತಃ ಮೈಸೂರಿನ ಅಶೋಕಪುರಂನವರಾದ ಶ್ರೀನಿವಾಸಪ್ರಸಾದ್ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಮೈಸೂರಿನ ಅಶೋಕಪುರಂನಲ್ಲಿ ಆಗಸ್ಟ್ 6, 1947 ರಂದು ಜನಿಸಿದ ಪ್ರಸಾದ್ ಅವರು ಚಾಮರಾಜನಗರ ಕ್ಷೇತ್ರವನ್ನು ಏಳು ಅವಧಿಗೆ ಸಂಸದರಾಗಿ ಪ್ರತಿನಿಧಿಸಿದ್ದರು ಮತ್ತು ಎರಡು ಬಾರಿ ನಂಜನಗೂಡು ಕ್ಷೇತ್ರದಿಂದ ಶಾಸಕರಾಗಿದ್ದರು.
ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮತ್ತು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಇಲಾಖೆ ಸಚಿವ ಸೇರಿದಂತೆ ಪ್ರಮುಖ ಸಚಿವ ಖಾತೆಗಳನ್ನು ಹೊಂದಿದ್ದರು.