ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗೆ ವಸ್ತುಗಳನ್ನ ಪೂರೈಕೆ ಮಾಡುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಚೀನಾ ಮತ್ತು ಬೆಲಾರಸ್ ಕಂಪನಿಗಳಿಗೆ ಅಮೆರಿಕ ನಿಷೇಧ ಹೇರಿದೆ. ಇದರಲ್ಲಿ ಚೀನಾದ ಮೂರು ಕಂಪನಿಗಳು ಸೇರಿದ್ದು, ಲಾಂಗ್ಡೆ ಟೆಕ್ನಾಲಜಿ ಡೆವಲಪ್ಮೆಂಟ್, ಟಿಯಾಂಜಿನ್ ಕ್ರಿಯೇಟಿವ್ ಸೋರ್ಸ್ ಇಂಟರ್ ನ್ಯಾಷನಲ್ ಟ್ರೇಡ್ ಮತ್ತು ಗ್ರೆನ್ಪೆಕ್ಟ್ ಕೋ ಇವು ಬ್ಯಾನ್ ಆಗಿರುವ ಮೂರು ಚೀನಾದ ಕಂಪನಿಗಳು. ಬೆಲಾರಸ್ ದೇಶದ ಮಿನ್ಸ್ಕ್ ವ್ಹೀಲ್ ಟ್ರಾಕ್ಟರ್ ಪ್ಲಾಂಟ್ ಕಂಪನಿಯೂ ಅಮೆರಿಕದಿಂದ ನಿಷೇಧಕ್ಕೆ ಒಳಗಾಗಿವೆ.
ಭಾರೀ ಹಾನಿ ಮಾಡುವ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬೇಕಾದ ವಸ್ತುಗಳನ್ನು ಪೂರೈಸಬಾರದು ಎನ್ನುವ ನೀತಿಯನ್ನು ಅಮೆರಿಕ ಅನುಸರಿಸುತ್ತದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕ್ಷಿಪಣಿ ತಯಾರಿಕೆಯ ಯೋಜನೆಗೆ ನೆರವಾದ ಈ ನಾಲ್ಕು ಕಂಪನಿಗಳು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿವೆ. ಪಾಕಿಸ್ತಾನಕ್ಕೆ ಚೀನಾ ಅನೇಕ ರೀತಿಯಲ್ಲಿ ಬೆಂಬಲ ನೀಡುತ್ತದೆ. ಪಾಕಿಸ್ತಾನದ ಮಿಲಿಟರಿ ಉನ್ನತೀಕರಣ ಯೋಜನೆಯಲ್ಲಿ ಚೀನಾ ಪಾತ್ರ ಮಹತ್ವದ್ದು. ಬಹಳಷ್ಟು ಶಸ್ತ್ರಾಸ್ತ್ರಗಳನ್ನು ಚೀನಾ ಸರಬರಾಜು ಮಾಡುತ್ತದೆ. ಬೆಲಾರಸ್ ದೇಶದ ಮಿಂಸ್ಕ್ ವ್ಹೀಲ್ ಟ್ರಾಕ್ಟರ್ ಪ್ಲಾಂಟ್ನಿಂದ ಪಾಕಿಸ್ತಾನಕ್ಕೆ ಸ್ಪೆಷಲ್ ವೆಹಿಕಲ್ ಚಾಸಿ ಪೂರೈಕೆ ಆಗುತ್ತಿತ್ತು.