ಮಧ್ಯಪ್ರದೇಶದ ರತ್ಲಂನಲ್ಲಿ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಗಂಭೀರ ಆರೋಪಗಳು ಹೊರಹೊಮ್ಮಿವೆ. ಚಿಕಿತ್ಸೆಗೆ ನೆಪ ಹೇಳಿ 1 ಲಕ್ಷ ರೂಪಾಯಿ ಪಾವತಿಸುವಂತೆ ಕುಟುಂಬದವರ ಮೇಲೆ ಒತ್ತಡ ಹೇರಿದ್ದಾಗಿ ದೂರಿದ ರೋಗಿಯೊಬ್ಬ, ಐಸಿಯುನಿಂದ ಬ್ರೀಥಿಂಗ್ ಪೈಪ್ ಸಹಿತ ತಪ್ಪಿಸಿಕೊಂಡು ಆಸ್ಪತ್ರೆಯ ಆವರಣದಲ್ಲೇ ಪ್ರತಿಭಟನೆ ನಡೆಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಖಾಸಗಿ ಆಸ್ಪತ್ರೆಗಳ ದುರ್ನಡತೆ ಮತ್ತು ಅತಿಯಾದ ಶುಲ್ಕ ವಸೂಲಿ ಕುರಿತು ಚರ್ಚೆಗಳನ್ನು ಪ್ರಚೋದಿಸಿದೆ.
ದೀನದಯಾಳ್ ನಗರದ ನಿವಾಸಿ ಬಂಟಿ ನಿನಾಮ್ ಅವರು ಜಗಳದಲ್ಲಿ ಗಾಯಗೊಂಡ ನಂತರ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ವೈದ್ಯರು ಅವರ ಬೆನ್ನು ಮೂಳೆ ಮುರಿದು ಕೋಮಾ ಸ್ಥಿತಿಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿ, ತಕ್ಷಣ 1 ಲಕ್ಷ ರೂಪಾಯಿ ಪಾವತಿಸುವಂತೆ ಕುಟುಂಬದವರಿಗೆ ಒತ್ತಾಯಿಸಿದ್ದಾರೆ. ಗಂಡನ ಜೀವ ಉಳಿಸಲು ಹಣ ಹೊಂದಿಸಲು ಹೆಣಗಾಡಿದ ಪತ್ನಿ ಮತ್ತು ತಾಯಿ, ಸಾಲ ಮಾಡಿ ಹಣ ಕೂಡಿಸಿದ್ದರು. ಆದರೆ, ರೋಗಿಯಾದ ನಿನಾಮ್ ತಾನು ಸುಸ್ಥಿತಿಯಲ್ಲಿದ್ದು, ಹಣ ವಸೂಲಿಗಾಗಿ ಮೋಸ ಮಾಡಲಾಗುತ್ತಿದೆ ಎಂದು ಗ್ರಹಿಸಿ, ಐಸಿಯು ಕೊಠಡಿಯಿಂದ ತಪ್ಪಿಸಿಕೊಂಡು ಆಸ್ಪತ್ರೆಯಲ್ಲೇ ಆರೋಪಗಳನ್ನು ಬಹಿರಂಗಪಡಿಸಿದ್ದಾರೆ.
Patient held captive in ICU and money extorted from relatives! Patient Ran escaped (A Pvt Hospital in Ratlam restrained a patient in the ICU and told the family that he went to coma and extorted 2 lacs from them in the name of treatment) Ratlam MP
pic.twitter.com/zk94rWzZ2u— Ghar Ke Kalesh (@gharkekalesh) March 6, 2025
ಸೋಶಿಯಲ್ ಮೀಡಿಯಾದಲ್ಲಿ ಹಂಚಲಾದ ವಿಡಿಯೋದಲ್ಲಿ, ನಿನಾಮ್ ಬ್ರೀಥಿಂಗ್ ಪೈಪ್ ಹಾಗೂ ಇತರ ಚಿಕಿತ್ಸಾ ಸಾಧನಗಳೊಂದಿಗೆ ಐಸಿಯುನಿಂದ ಹೊರಗೆ ಬರುವ ದೃಶ್ಯಗಳು ಕಾಣಸಿಗುತ್ತವೆ. ಅವರು ಆಸ್ಪತ್ರೆಯ ಆವರಣದಲ್ಲಿ ನಿಂತು, “ನನ್ನನ್ನು ಕೋಮಾ ಎಂದು ಸುಳ್ಳು ಹೇಳಿ ಹಣ ಹೀರಲಾಗುತ್ತಿದೆ. ಇದು ಕೇವಲ ಸುಲಿಗೆ!” ಎಂದು ಘೋಷಿಸಿದ್ದಾರೆ. ಈ ವಿಡಿಯೋವನ್ನು @gharkekalesh ಎಕ್ಸ್ ಖಾತೆಯು ಹಂಚಿದ ನಂತರ, ನೂರಾರು ಕಾಮೆಂಟ್‌ಗಳನ್ನು ಪಡೆದಿದೆ. ಬಳಕೆದಾರರು, “ಆಸ್ಪತ್ರೆಗಳು ಕಾರಣವಿಲ್ಲದೆ ಬಿಲ್ ಹಾಕುತ್ತವೆ”, “ವೈದ್ಯಕೀಯ ವ್ಯವಸ್ಥೆಯ ಅವನತಿ” ಎಂದು ಟೀಕಿಸಿದ್ದಾರೆ.