ಯಾದಗಿರಿ: ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುಮನೂರು ಗ್ರಾಮದ ವರ ಕುಪೇಂದ್ರ ಹಾಗೂ ವಡಗೇರಾ ಪಟ್ಟಣದ ವಧು ಶ್ರೀದೇವಿಯ ಪ್ರೀ-ವೆಡ್ಡಿಂಗ್ ಶೂಟ್ ಗ್ರಾಮೀಣ ಸೊಗಡಿನೊಂದಿಗೆ ವಿಶಿಷ್ಟವಾಗಿ ನಡೆದಿದೆ.
ಇಂದಿನ ದಿನಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟ್‌ಗಳಲ್ಲಿ ಫ್ಯಾಷನ್ ಡ್ರೆಸ್‌ಗಳು ಮತ್ತು ಆಧುನಿಕ ಶೈಲಿಯ ಚಿತ್ರೀಕರಣ ಸಾಮಾನ್ಯವಾಗಿದೆ. ಆದರೆ, ಕುಪೇಂದ್ರ ಮತ್ತು ಶ್ರೀದೇವಿ ತಮ್ಮ ಶೂಟ್‌ಗೆ ಅಪ್ಪಟ ಗ್ರಾಮೀಣ ಸಂಪ್ರದಾಯವನ್ನು ಆಯ್ದುಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಕುರಿಗಾಹಿ ವೇಷದಲ್ಲಿ ಕಾಣಿಸಿಕೊಂಡ ವರ ಕುಪೇಂದ್ರ, ಪಂಜೆ ಧರಿಸಿ, ತಲೆಗೆ ಟವಲ್ ಕಟ್ಟಿಕೊಂಡು ಕುರಿ ಕಾಯುವ ಗ್ರಾಮೀಣ ಯುವಕನ ರೂಪದಲ್ಲಿ ಮಿಂಚಿದ್ದಾರೆ. ಇನ್ನು ವಧು ಶ್ರೀದೇವಿ, ಇಳಕಲ್ ಸೀರೆಯಲ್ಲಿ ಕಂಗೊಳಿಸುತ್ತಾ, ಕೈಯಲ್ಲಿ ಬಡಿಗೆ ಹಿಡಿದು ಗ್ರಾಮೀಣ ಹೆಣ್ಣಿನ ಸೊಬಗಿನೊಂದಿಗೆ ಶೂಟ್‌ನಲ್ಲಿ ಭಾಗವಹಿಸಿದ್ದಾರೆ.
ಈ ವಿಶಿಷ್ಟ ಪ್ರೀ-ವೆಡ್ಡಿಂಗ್ ಫೋಟೋ ಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮೀಣ ಸಂಸ್ಕೃತಿಯ ಸೌಂದರ್ಯವನ್ನು ಮೆರೆದಿದೆ. ಇಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಎಲ್ಲರಿಂದಲೂ ಶುಭಾಶಯಗಳು ಹರಿದುಬರುತ್ತಿವೆ.