ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹುಚ್ಚು ದಿನೇ ದಿನೇ ಹೆಚ್ಚಾಗುತ್ತಿದ್ದು, ಯುವಕ-ಯುವತಿಯರು ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ಪ್ರಾಣಕ್ಕೆ ಕುತ್ತು ತರುವ ಸಾಹಸಗಳನ್ನು ಮಾಡುತ್ತಿದ್ದಾರೆ. ಇಂತಹದ್ದೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಕಾಶ್ಮೀರಿ ಮಹಿಳೆಯೊಬ್ಬರು ಮರದ ತುತ್ತ ತುದಿಯಲ್ಲಿ ನಿಂತು ಡಾನ್ಸ್ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಉಷಾ ನಾಗವಂಶಿ ಎಂಬ ಮಹಿಳೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಾದ ushanagavamshi31ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಈ ಮಹಿಳೆ ಮರದ ತುದಿಯಲ್ಲಿ ಸಮತೋಲನ ಸಾಧಿಸಿಕೊಂಡು, ಬಾಲಿವುಡ್‌ನ ಜನಪ್ರಿಯ ಹಾಡು ಝಲ್ಲಾ ವಲ್ಲಾಹ್ಗೆ ಸ್ಟೆಪ್ ಹಾಕುತ್ತಿರುವುದನ್ನು ಕಾಣಬಹುದು. ಆಕೆ ನಿಂತಿರುವ ಮರದ ಹಿಂಭಾಗದಲ್ಲಿ ಕಡಿದಾದ ಇಳಿಜಾರಿನ ಪ್ರದೇಶವಿದ್ದು, ಸ್ವಲ್ಪ ಬ್ಯಾಲೆನ್ಸ್ ತಪ್ಪಿದರೂ ಪ್ರಪಾತಕ್ಕೆ ಬೀಳುವ ಅಪಾಯವಿತ್ತು. ಆದರೆ, ಈ ಮಹಿಳೆಯ ಮುಖದಲ್ಲಿ ಯಾವುದೇ ಭಯ ಕಾಣಿಸದೇ, ಧೈರ್ಯದಿಂದ ಹಾಡಿಗೆ ತಕ್ಕಂತೆ ನೃತ್ಯ ಮಾಡಿದ್ದಾಳೆ.
ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ 23 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಮಹಿಳೆಯ ಸಾಹಸಕ್ಕೆ ಅಚ್ಚರಿಯೊಂದಿಗೆ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಈ ಅಪಾಯಕಾರಿ ಸಾಹಸವನ್ನು ಟೀಕಿಸಿದರೆ, ಇನ್ನು ಕೆಲವರು ಆಕೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ.
-
ಒಬ್ಬ ಬಳಕೆದಾರ ಬರೆದಿದ್ದಾರೆ, “ರೀಲ್ಸ್ ಹುಚ್ಚಿಗಾಗಿ ಇಂತಹ ಅಪಾಯಕಾರಿ ಕೆಲಸಗಳನ್ನು ಮಾಡಬೇಡಿ.”
-
ಇನ್ನೊಬ್ಬರು, “ಇದು ಮತ್ತೊಂದು ಐಫೆಲ್ ಟವರ್!” ಎಂದು ಲೇವಡಿ ಮಾಡಿದ್ದಾರೆ.
-
ಮತ್ತೊಬ್ಬ ಬಳಕೆದಾರ, “ಈ ವಿಡಿಯೋ ನೋಡಿದರೆ ಎದೆಬಡಿತವೇ ಹೆಚ್ಚಾಗುತ್ತದೆ. ಸ್ವಲ್ಪ ಬ್ಯಾಲೆನ್ಸ್ ತಪ್ಪಿದರೂ ಪ್ರಪಾತಕ್ಕೆ ಬೀಳುವುದು ಖಚಿತ” ಎಂದಿದ್ದಾರೆ.
-
ಕೆಲವರು, “ಈ ಮಹಿಳೆಯ ಧೈರ್ಯ ಅದ್ಭುತ!” ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.