ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗೆ 38 ವರ್ಷದ ಹಿರಿಯ ಆಟಗಾರ, ಸ್ಪಿನ್ನರ್ ಆರ್ ಅಶ್ವಿನ್ ನಿವೃತ್ತಿ ಹೇಳಿದ್ದಾರೆ.ತಮ್ಮ 38ನೇ ವಯಸ್ಸಿಗೆ ಕ್ರಿಕೆಟ್ ಅಂಗಳಕ್ಕೆ ಗುಡ್ ಬೈ ಹೇಳಿದ ಆರ್ ಅಶ್ವಿನ್ಗೆ ಶುಭಾಶಯಗಳ ಜೊತೆಗೆ ಮಿಸ್ ಯೂ ಲೆಜೆಂಡ್ ಅಂತೆಲ್ಲಾ ಹೇಳುತ್ತಿದ್ದಾರೆ. ಆರಂಭದಲ್ಲಿ ಆರ್ ಅಶ್ವಿನ್ ನಿವೃತ್ತಿ ಘೋಷಿಸಿದ್ದು ಕೇವಲ ರೂಮರ್ಸ್ ಎಂದೇ ಹೇಳಲಾಗಿತ್ತು. ಆದರೆ ಅಶ್ವಿನ್ ನಿವೃತ್ತಿಯನ್ನು ಸದ್ಯ ಬಿಸಿಸಿಐಯೇ ಅಧಿಕೃತಗೊಳಿಸಿದೆ.
ತನ್ನ ಟ್ವಿಟರ್ ಖಾತೆಯಲ್ಲಿ ಅಶ್ವಿನ್ ನಿವೃತ್ತಿ ಬಗ್ಗೆ ಪೋಸ್ಟ್ ಮಾಡಿ ದೃಢಿಕರೀಸಿರುವ ಬಿಸಿಸಿಐ ಎಲ್ಲಾ ಊಹಾಪೋಹಗಳಿಗೆ ವಿರಾಮವಿಟ್ಟಿದೆ. ಥ್ಯಾಂಕ್ಯು ಅಶ್ವಿನ್, ಈ ಹೆಸರಲ್ಲಿಯೇ ಒಂದು ಮಾಂತ್ರಿಕತೆ, ನಾವಿನ್ಯತೆ, ಪಾಂಡಿತ್ಯ ಹಾಗೂ ತೇಜಸ್ಸು ಇದೆ. ಸ್ಪಿನ್ ಮಾಂತ್ರಿಕ ಹಾಗೂ ಭಾರತ ತಂಡದ ಆಲ್ರೌಂಡರ್ ಆಟಗಾರ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ದಿಗ್ಗಜ ಆಟಗಾರನಿಗೆ ಶುಭಾಶಯಗಳು ಎಂದು ಹೇಳಿದೆ.
2010 ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯವಾಡುವ ಮೂಲಕ ಅಶ್ವಿನ್ ಟೀಂ ಇಂಡಿಯಾ ಕ್ಯಾಪ್ ಧರಿಸಿದ್ದರು. 106 ಟೆಸ್ಟ್ ಕ್ರಿಕೆಟ್ ಆಡಿರುವ ಅಶ್ವಿನ್ 537 ವಿಕೆಟ್ ಪಡೆದಿದ್ದಾರೆ. 59 ರನ್ ನೀಡಿ 7 ವಿಕೆಟ್ ಪಡೆದಿದ್ದು ಇವರ ಅತ್ಯುತ್ತಮ ಸಾಧನೆ. 6 ಶತಕ ಮತ್ತು 14 ಬಾರಿ ಅರ್ಧಶತಕ ಹೊಡೆದಿದ್ದಾರೆ.
116 ಏಕದಿನ ಪಂದ್ಯವಾಡಿರುವ ಅಶ್ವಿನ್ 156 ವಿಕೆಟ್ ಪಡೆದರೆ 65 ಟಿ20 ಪಂದ್ಯಗಳಿಂದ 72 ವಿಕೆಟ್ ಪಡೆದಿದ್ದಾರೆ. 2022ರ ನವೆಂಬರ್ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ20 ಕ್ರಿಕೆಟ್ ಆಡಿದ್ದರೆ, 2023ರ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಅಶ್ವಿನ್ ಆಡಿದ್ದರು.
ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಅಶ್ವಿನ್ ಆಗಿದ್ದಾರೆ. ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದರೆ ಅಶ್ವಿನ್ 537 ವಿಕೆಟ್ ಪಡೆದಿದ್ದರು.